Sunday, April 25, 2021

‘ನೀವು’ ಇಲ್ಲದಿದ್ದರೆ, ಪ್ರೀತಿ ಇರಲು ಸಾಧ್ಯ

 ಡಿಯರ್ ವಂಡರ್ಫುಲ್ ಸೆಲ್ಫ್,

ಎಲ್ಲಾ ಗುರುಗಳು ಹಾಗೂ ಧರ್ಮಗಳು, ಎಲ್ಲರೆಡೆಗೆ ಪೀತಿಯಿಟ್ಟುಕೊಳ್ಳುವುದನ್ನು ಮೋಕ್ಷ ಅಥವಾ ಮುಕ್ತಿಗೆ ಅಗತ್ಯವಾದ ಹೆಜ್ಜೆ ಎಂದು ಒತ್ತಿ ಹೇಳಿದ್ದಾರೆ.

ಮೂಲಭೂತವಾಗಿ ಪ್ರೀತಿ ಎಂದರೆ, ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಯನ್ನು ದಾಟಿ ಹೋಗುವುದು ಎಂದರ್ಥ. ನಾನು ಒಂದನ್ನು ಇಷ್ಟಪಡುತ್ತೇನೆ ಮತ್ತು ಇನ್ನೊಂದನ್ನು ಇಲ್ಲ - ಈ ಹಂತದಲ್ಲಿ ಪ್ರೀತಿ ಸಾಧ್ಯವೇ ಇಲ್ಲ, ಏಕೆಂದರೆ ನಾವು ನಮ್ಮ ಅಹಂ ಗೆ ಅನುಕೂಲಕರವಾಗಿರುವ ಅಥವಾ ಅದನ್ನು ಬೆಂಬಲಿಸುವ ಸಂಗತಿಗಳನ್ನು ಮಾತ್ರ ಇಷ್ಟಪಡುತ್ತೇವೆ.

ಪ್ರೀತಿ ಎಂದರೆ ನಮ್ಮನ್ನು ಸಂಪೂರ್ಣವಾಗಿ ಕರಗಿಸಬಲ್ಲ ರಸವಿದ್ಯೆ. ಹಾಗಾಗಿಯೇ ಆಂಗ್ಲದಲ್ಲಿ ‘Falling in love' (ಪ್ರೀತಿಯಲ್ಲಿ ಬೀಳುವುದು) ಎಂದು ಹೇಳುವರು, ಪ್ರೀತಿಯಲ್ಲಿ ನಿಲ್ಲುವುದು ಅಥವಾ ಪ್ರೀತಿಯಲ್ಲಿ ಏರುವುದು ಎನ್ನುವುದಿಲ್ಲ. ಬೀಳುವುದರಲ್ಲಿ ಮಾತ್ರ ಪ್ರೀತಿಯಿರಲು ಸಾಧ್ಯ. ‘ನೀವು’ ಇಲ್ಲದಿದ್ದರೆ, ಪ್ರೀತಿ ಇರಲು ಸಾಧ್ಯ. ಒಬ್ಬರು ಮಾಡುವ ಎಲ್ಲಾ ಸಾಧನಗಳು ಪ್ರೀತಿಯಿಲ್ಲದಿದ್ದರೆ, ಒಂದು ಬರಡು ಹಾಗೂ ಫಲಪ್ರದವಲ್ಲದ ಪ್ರಯತ್ನವಾಗುತ್ತದೆ. ಅನೇಕರಿಗೆ, ಅವರ ಧ್ಯಾನ ಮತ್ತು ಇತರ ಅಭ್ಯಾಸಗಳು, ಮತ್ತು ಯೋಗ ಕಾರ್ಯಕ್ರಮಗಳು ಚೈತನ್ಯದ ಏರಿಳಿತದ ತೂಗುಯ್ಯಾಲೆಯಾಗುತ್ತದೆ, ಏಕೆಂದರೆ ಅವರು ಅಮಿತವಾದ ಪ್ರೀತಿಯ ಹೆಜ್ಜೆಯನ್ನು ಇಟ್ಟಿಲ್ಲ.

ಪ್ರೀತಿ ಅಂತಿಮವಾದುದಲ್ಲ, ಆದರೆ ಅಂತಿಮದೆಡೆಗೆಮಹತ್ತರವಾದ ಹೆಜ್ಜೆ. ಪ್ರೀತಿಯಿಲ್ಲದೆ, ಅನೇಕರು ತಲುಪುವುದೇ ಇಲ್ಲ. ಗೌತಮ ಬುದ್ಧ, ಮುಕ್ತಿ ಅಥವಾ ನಿರ್ವಾಣಕ್ಕಾಗಿ ಅನೇಕ ರೀತಿಯ ಸಾಧನಗಳನ್ನು ಮಾಡಿದ ನಂತರ, ಮುಂದಿನ ಬಾರಿ ನಾನು ಮೈತ್ರೇಯನಾಗಿ ಬರುವೆ ಎಂದು ಹೇಳಿದ. ಮೈತ್ರೇಯ ಎಂದರೆ ಗೆಳೆಯ ಅಥವಾ ಪ್ರೀತಿ, ಹಾಗೆಂದರೆ ಮುಂದಿನ ಬಾರಿ ನನ್ನ ಗುಣ ಪ್ರೀತಿಯದ್ದಾಗಿರುತ್ತದೆ ಎಂದು. ಪ್ರೀತಿಯ ಸಾಂಗತ್ಯವಿಲ್ಲದಿದ್ದರೆ, ಸಾಧನಗಳು ಅಹಂನನ್ನು ಪೋಷಿಸುವ ವಿಧಾನಗಳಾಗುತ್ತವೆ.

ನಿಮ್ಮ ಪ್ರೀತಿ ಅರಳಲಿ ಹಾಗೂ ಅದರ ಸುವಾಸನೆಯು ಎಲ್ಲ ಜೀವಿಗಳಿಗೂ ಅನಿಯಮಿತವಾಗಿ ಹರಡಲಿ.

ಪ್ರೀತಿ ಮತ್ತು ಆಶೀರ್ವಾದಗಳು
ಸದ್ಗುರು

(ಅಧಿಕೃತ ಭಾಷಾಂತರ ಅಲ್ಲ)




Monday, April 5, 2021

ನಾವು-ನೀವು ಕಲಿಯಬೇಕಾಗಿರುವುದು ಇಷ್ಟು!

 ಕೃಷ್ಣ ಒಂದು  ಅದ್ಭುತ ವ್ಯಕ್ತಿತ್ವ. ಆತ ವ್ಯಕ್ತಿತ್ವವೇ ಇಲ್ಲದ, ಎಲ್ಲ ವ್ಯಕ್ತಿತ್ವಗಳನ್ನು ಮೀರಿದ ವ್ಯಕ್ತಿತ್ವ.

‘ನಾನು ಸುಳ್ಳು ಹೇಳುವುದಿಲ್ಲ’ ಎಂದರೆ ಕೃಷ್ಣ ನಗುತ್ತಾನೆ. ‘ನಾನು ನೃತ್ಯ ಮಾಡುವುದಿಲ್ಲ’ ಎಂದರೆ ಕೃಷ್ಣ ಕರುಣೆಯ ನೋಟ ಬೀರುತ್ತಾನೆ. ರಾಧೆಯ ಪ್ರೀತಿಸಿದ ಕೃಷ್ಣ, 16ರ ನಂತರ 6 ವರುಷ ಸನ್ಯಾಸಿ. ಗುರುಕುಲಕ್ಕೆ ಹೋದ ಕೃಷ್ಣ ನಡೆಸಿದ್ದು ಕಠೋರ ಬ್ರಹ್ಮಚರ್ಯದ ಜೀವನ. ಕೊಳಲೂದುತ್ತ, ದನಗಳನ್ನು ಮೇಯಿಸುತ್ತ ಕೋಮಲ ಸ್ವಭಾವದ ಸಾಮಾನ್ಯ ಹುಡುಗನಾಗಿ ತೋರುವ ಕೃಷ್ಣ, ಯುದ್ಧಕಲೆಗಳ ನಿಪುಣ. ಸುಳ್ಳು ಹೇಳುತ್ತಾನೆ, ಮೋಸಮಾಡುತ್ತಾನೆ ಎಂದೆನಿಸುವ ಕೃಷ್ಣ, ಮಹಾಭಾರತದ ಕಾಲಕ್ಕೆ ಧರ್ಮ ಸಂಸ್ಥಾಪಿಸಿದ ಸೂತ್ರಧಾರಿ!

ಕೃಷ್ಣನನ್ನು ಒಂದು ವ್ಯಕ್ತಿತ್ವದ ಕಟ್ಟುಪಾಡಿಗೆ ಹಾಕಲು ಹೋದರೆ, ಅದು ಮೂರ್ಖತನ ಅಷ್ಟೇ.

ಇದು ಆತನ ಅತ್ಯಂತ ಪ್ರಮುಖ ಸಂದೇಶಗಳಲ್ಲಿ ಒಂದು ಎಂದು ನನ್ನ ಭಾವನೆ. ಆತನ ಬದುಕೇ ಆತನು ಜಗತ್ತಿಗೆ ನೀಡಿದ ಸಂದೇಶ. " ಸರಿ-ತಪ್ಪು, ಧರ್ಮ-ಅಧರ್ಮ ಮುಂತಾದವುಗಳು ನೀವಿರುವ ಕಾಲಕ್ಕೆ, ಅಥವಾ ಸಮಾಜಕ್ಕೆ ತಕ್ಕಂತೆ ಬದಲಾಗಬಹುದು. ಒಬ್ಬರ ಕಣ್ಣಿಗೆ ಕಂಡ ‘ಸರಿ’, ಮತ್ತೊಬ್ಬರ ಕಣ್ಣಿನಲ್ಲಿ ತಪ್ಪಾಗಬಹುದು. ಒಂದು ಪುಸ್ತಕದ ಧರ್ಮ, ಮತ್ತೊಂದು ಪುಸ್ತಕದಲ್ಲಿ ಅಧರ್ಮವಾಗಬಹುದು. ಸಾವಿರಾರು ಜನ, ಸಾವಿರಾರು ರೀತಿ ಹೇಳಬಹುದು. ಆದ್ದರಿಂದ, ನೀವು ಇರಬೇಕಾಗಿರುವುದು ಸನ್ನಿವೇಷಕ್ಕೆ ಹಾಗೂ ಜಾಗಕ್ಕೆ ’ಸೂಕ್ತ’ವಾಗಿ, ಎಲ್ಲೋ ಬರೆದಿಟ್ಟಿರುವ ಹಾಗೆ ‘ಇದೇ ಸರಿ’ ಎಂಬ ಕಟ್ಟುಪಾಡಿಗೆ ಬಂಧಿಯಾಗಿ ಅಲ್ಲ" ಎಂದು. ಈ ಮಾತುಗಳನ್ನು ಅವನು ಹೇಳಿರುವನೋ ಇಲ್ಲವೋ ಗೊತ್ತಿಲ್ಲ, ಆದರೆ ಅವನ ಜೀವನದಲ್ಲಿ ಕಾಣುತ್ತಿರುವುದಂತೂ ಅದೇ.

ಇದು ನನ್ನ ‘ಸಿದ್ಧಾಂತ’. ಇದು ನನ್ನ ‘ಧರ್ಮ’ ಎಂದು ನೀವು ತಿಳಿದುಕೊಂಡು, ಎಲ್ಲಾ ಸನ್ನಿವೇಶಗಳಲ್ಲೂ ಹಾಗೆಯೇ ವರ್ತಿಸಿದರೆ, ಅದು ತಪ್ಪಾದೀತು. ಉದಾಹರಣೆಗೆ, ರೌಡಿಯೊಬ್ಬ ಯಾರನ್ನೋ ಕೊಲ್ಲಲು ಅಟ್ಟಿಸಿಕೊಂಡು ಬರುತ್ತಿದ್ದಾನೆ ಎಂದುಕೊಳ್ಳಿ. ನಿಮಗೆ ಆತನ ಟಾರ್ಗೆಟ್ ಅವಿತಿರುವ ಜಾಗ ಗೊತ್ತು. ಈತ ನಿಮ್ಮ ಬಳಿ ಬಂದು ‘ಆತನನ್ನು ನೋಡಿದೆಯಾ?’ ಎಂದು ಕೇಳುತ್ತಾನೆ. ನೀವು ‘ಸತ್ಯ’ ನನ್ನ ಧರ್ಮ, ಯಾವಾಗಲೂ ಸತ್ಯವನ್ನೇ ಹೇಳಬೇಕು ಅಂತ ಹೇಳಿಕೊಟ್ಟಿದ್ದಾರೆ ಅಂತೆಲ್ಲ ಯೋಚನೆ ಮಾಡಿಕೊಂಡು, ಆತನಿಗೆ ಸತ್ಯವನ್ನೇ ಹೇಳಿದರೆ, ಆಗುವ ಪರಿಣಾಮ ಏನು? ಆ ಸನ್ನಿವೇಶದಲ್ಲಿ ಕೃಷ್ಣ ಇದ್ದಿದ್ದರೆ ಏನು ಮಾಡುತ್ತಿದ್ದ?

ಅಷ್ತಕ್ಕೂ ನೀವು ಒಂದು ‘ಸಿದ್ಧಾಂತ’ಕ್ಕೆ ಅಥವಾ ‘ನಂಬಿಕೆ’ಗೆ ಜೋತುಬಿದ್ದು, ಅದರ ಪ್ರಕಾರವಷ್ಟೇ ಕಾರ್ಯ ನಿರ್ವಹಿಸುತ್ತೀರಿ ಎಂದರೆ, ನಿಮ್ಮ ಕಾರ್ಯಾತ್ಮಕ ಬುದ್ಧಿವಂತಿಕೆ ಅಥವಾ active intelligence ಅನ್ನು ಒತ್ತೆ ಇಟ್ಟಿದ್ದೀರಿ ಅಂತ ಅರ್ಥ. ಅಥವಾ ಒಂದು ರೋಬೋಟ್ ಆಗಿದ್ದೀರಿ ಎಂದು ಅರ್ಥ. ಮನುಷ್ಯನ ನಿಜವಾದ ಗುಣ ಅದಲ್ಲ. ಅವನಿಗೆ ಒಂದು ಅದ್ಭುತವಾದ ಬುದ್ಧಿಶಕ್ತಿ ಮತ್ತು ಪ್ರಜ್ಞೆಯನ್ನು ಸೃಷ್ಟಿ ಕೊಟ್ಟಿದೆ. ಬಳಸಲಿ ಎಂದು. ನೀವಿರುವ ಪರಿಸ್ಥಿತಿಗೆ, ಸನ್ನಿವೇಶಕ್ಕೆ ಅನುಗುಣವಾಗಿ ನಿಮಗೆ ಹಾಗೂ ನಿಮ್ಮ ಸುತ್ತಲಿನವರಿಗೆ ಅತ್ಯಂತ ಶ್ರೇಷ್ಠವಾದುದನ್ನು ಮಾಡಲಿ ಎಂದು. ಹಾಗೆ ಮಾಡದಿದ್ದರೆ, ನೀವು ಸೃಷ್ಟಿಯ ಆ ಔದಾರ್ಯಕ್ಕೆ ಅಪಕೃತಿ ಎಸಗಿದ ಹಾಗೆ.

ಹಾಗಿದ್ದರೆ ಈಗ ಸಂವಿಧಾನ ಏಕೆ ಬೇಕು? ಗ್ರಂಥಗಳು ಏಕೆ ಬೇಕು? ಇವೆಲ್ಲದರ ಅವಶ್ಯಕತೆ ಇಲ್ಲವೇ ಎಂದು ನೀವು ಕೇಳಬಹುದು. ಒಂದು ವೇಳೆ ಸಮಾಜದ ಪ್ರತಿಯೊಬ್ಬ ಮನುಷ್ಯನೂ 100% ಮಾನವನಾದರೆ, ಅವನಲ್ಲಿ ಅವನ ಮಾನವೀಯ ಪ್ರಜ್ಞೆ ಉಕ್ಕಿ ಹರಿದರೆ, ಬಹುಶಃ ಅವುಗಳ ಅವಶ್ಯಕತೆ ಇರಲಿಕ್ಕಿಲ್ಲ. ಆದರೆ ಈಗ ಹಾಗಿಲ್ಲ. ಒಂದು ದೊಡ್ಡ ಸಮಾಜವನ್ನು ನಡೆಸಲು, ಸುಗಮವಾಗಿ ದೈನಂದಿನ ಚಟುವಟಿಕೆಗಳು ಸಾಗುವಂತೆ ಮಾಡಲು ಇವುಗಳ ಅವಶ್ಯಕತೆ ಇದೆ. ಆದರೆ ವೈಯಕ್ತಿಕವಾಗಿ, ನಿಮ್ಮ ಜೀವನದ ದೈನಂದಿನ ಚಟುವಟಿಕೆಗಳಲ್ಲಿ ನಿಮಗೆ ಸಿದ್ಧಾಂತ, ನಂಬಿಕೆ, ಗ್ರಂಥಗಳ ಅವಶ್ಯಕತೆ ಬರಬಾರದು. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ಅಧ್ಯಯನ ಮಾಡಲು, ನಿಮಗೆ ತಿಳಿಯದ ಜೀವನದ ಆಯಾಮಗಳ ಬಗ್ಗೆ ತಿಳಿಯಲು ಗ್ರಂಥಗಳ ಬಳಕೆ ಸರಿ. ಕೆಲಸ ಮಾಡುತ್ತಿದೆ ಎಂದು ಗೊತ್ತಿರುವುದರಿಂದ, ಹಿರಿಯರು ಹೇಳಿಕೊಟ್ಟ ಕೆಲವು ಸಂಗತಿಗಳನ್ನು ನಂಬಿ ಆಚರಿಸುವುದು ಸರಿ. ಆದರೆ, ನಿಮ್ಮ ಪಕ್ಕದ ಮನೆಯವರಿಗೆ ಸಹಾಯ ಮಾಡಲು, ಹಸಿದವರಿಗೆ ಸಾಧ್ಯವಾದರೆ ಅನ್ನಹಾಕಲು, ನಾಲ್ಕೈದು ಮರ ನೆಡಲು, ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ನೋಡಲು, ಸ್ವಲ್ಪ ಅಧ್ಯಾತ್ಮಿಕರಾಗಲು, ಸಮಾಜಕ್ಕೆ ಹೊರೆಯಾಗಿ ಬದುಕದೇ, ಅದಕ್ಕೆ ಪೂರಕವಾಗಿ ಬದುಕಲು - ನಿಮಗೆ ಗ್ರಂಥ, ಸಿದ್ಧಾಂತ, ನಂಬಿಕೆಗಳ ಅವಶ್ಯಕತೆ ಇರುವುದಿಲ್ಲ. ನಿಮ್ಮ ಪ್ರಜ್ಞೆ ಒಂದಿದ್ದರೆ ಸಾಕು.

ಆದರೆ ಈ ‘ಪ್ರಜ್ಞೆ’ ಎಂಬ ಸಂಗತಿಯನ್ನು ನಮ್ಮೊಳಗೆ ಕಾಪಿಟ್ಟುಕೊಳ್ಳುವುದು, ಬೆಳೆಸುವುದು, ನೀರೆರೆಯುವುದು ಬಹಳ ಸುಲಭದ ಕೆಲಸವೇನಲ್ಲ. ಸಾಧ್ಯವಾಗದ ಕೆಲಸವೂ ಅಲ್ಲ. ಭಾರತೀಯ ಸಂಸ್ಕೃತಿಯಂತೂ ಇದನ್ನು ಅರ್ಥಮಾಡಿಕೊಂಡು, ಅದರ ಸುತ್ತಲೇ ಬೆಳೆದಿರುವ ಸಂಸ್ಕೃತಿ. ನಮಗೆ - ನಿಮಗೆ ಈ ನಿಟ್ಟಿನಲ್ಲಿ ಬೆಳೆಯಲು ಕಷ್ಟವಾಗಬಾರದು.

ಮನುಷ್ಯ ತನ್ನ ಪ್ರಜ್ಞೆಯ ಮೇಲೆ ಬದುಕಿದಾಗ ಮಾತ್ರ, ಪ್ರತಿಕ್ಷಣವೂ ಪ್ರಜ್ಞಾಪೂರ್ವಕವಾಗಿ ಇದ್ದಾಗ ಮಾತ್ರ, ಒಂದು ಸಂಪೂರ್ಣ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಮನುಷ್ಯ ಈ ಧರೆಗೆ ವರವಾಗಿ ಪರಿಣಮಿಸಲು ಸಾಧ್ಯ. ಆ ನಿಟ್ತಿನಲ್ಲಿ ಕೆಲಸ ಮಾಡೋಣ. 



Saturday, April 3, 2021

ದೇವಸ್ಥಾನಗಳು ಕೇವಲ ನಂಬುಗೆಯ ಸ್ಥಳವಷ್ಟೇ ಅಲ್ಲ!

 ನಮಗೆ ದೇವಸ್ಥಾನಗಳನ್ನು ಈ ದೇಶದಲ್ಲಿ ಏಕೆ ಕಟ್ಟಿದರು ಎಂಬ ವಾಸ್ತವವೇ ಮರೆತು ಹೋಗಿದೆ. ಇದು ದುರಂತವಾದರೂ ನಿಜ.

ದೇವಸ್ಥಾನಗಳು ಎಂದರೆ ಚಂದದ ಮೂರುತಿಯಿರುವ ಸ್ಥಳ ಅಲ್ಲ. ಸಹಸ್ರ ಕೆತ್ತನೆಗಳಿರುವ ಅಮೋಘ ವಾಸ್ತುಶಿಲ್ಪವಲ್ಲ. ಸಾವಿರಾರು ಜನ ಬಂದು ಹೋಗುವ ಒಂದು ಪಿಕ್ ನಿಕ್ ಸ್ಥಳವಲ್ಲ. ಒಂದಿಷ್ಟು ಕಠೋರ ಭಕ್ತರು ಮಡಿ ಮೈಲಿಗೆಯಲ್ಲಿ ನಡೆಸಿಕೊಂಡು ಹೋಗುತ್ತಿರುವ ನಂಬಿಕಾ ಸ್ಥಳವಲ್ಲ. ನಾವು ನೀವು ಹೋಗಿ, ದೇವರಿಗೆ ಜಗತ್ತನ್ನು ಹೇಗೆ ನಡೆಸಬೇಕು ಎಂದು advice ಮಾಡುವ ಸ್ಥಳವೂ ಅಲ್ಲ.

ಭಾರತದಲ್ಲಿ ದೇವಸ್ಥಾನಗಳ ಪರಿಕಲ್ಪನೆ, ಅಲ್ಲಿ ಹೋಗಿ ಪ್ರಾರ್ಥಿಸಬೇಕು ಎನ್ನುವುದಲ್ಲ. ಅಥವಾ ಅವು ದೇವರ, ಸೃಷ್ಟಿಕರ್ತನ ಮೇಲಿನ ಭಯದಿಂದ ಕಟ್ಟಿಸಿದ ಸ್ಮಾರಕಗಳಲ್ಲ. ಹಾಗಿದ್ದರೆ ದೇವಸ್ಥಾನಗಳು ಎಂದರೆ ಏನು? ಅವುಗಳನ್ನು ಕಟ್ಟಿಸಿದ್ದು ಏಕೆ? ಇದು ಕೇವಲ ಒಂದು ನಂಬಿಕೆಯೋ ಅಥವಾ ಇದರಿಂದ ಮಾನವತೆಗೆ ಪ್ರಯೋಜನಗಳಿವೆಯೋ?

ಮೂಲತಃವಾಗಿ ಭಾರತೀಯ ಸಂಸ್ಕೃತಿ ಬೆಳೆದು ಬಂದ ಚಿಕ್ಕ ಚಿತ್ರಣವನ್ನು ನೋಡೋಣ. ಯಾವ ಕಾಲದಲ್ಲಿ, ಪ್ರಪಂಚದ ಇನ್ನಿತರ ಸ್ಥಳಗಳಲ್ಲಿ ಮನುಷ್ಯರು ಇನ್ನೂ ಕಾಡುಗಳಲ್ಲಿ ವಾಸಿಸುತ್ತಿದ್ದರೋ, ಆ ಕಾಲದಲ್ಲಿ - ಕಲೆ, ಸಂಸ್ಕೃತಿ, ವಿಜ್ಞಾನ, ಯೋಗ, ವೇದ, ಖಗೋಳ, ಸಾಹಿತ್ಯ, ಜ್ಯೋತಿಷ್ಯ, ನೃತ್ಯ, ಸಂಗೀತ ಇವೆಲ್ಲವುಗಳ ಪರಾಕಾಷ್ಠೆಯನ್ನು ಕಂಡಿತ್ತು ಈ ನೆಲ. ಇವೆಲ್ಲ ಹೇಗೆ ಸಾಧ್ಯವಾಯಿತು? ಭಾರತದ ಭೌಗೋಳಿಕ ಸ್ಥಾನ ನೋಡಿದರೆ, ಕೆಲವು ಉತ್ತರಗಳು ಸಿಕ್ಕಾವು. ಮೇಲಿನಿಂದ ಹಿಮಾಲಯ, ಕೆಳಗಿನಿಂದ ಇಂದೂ ಮಹಾಸಾಗರದಿಂದ ಸುತ್ತುವರೆದ gifted ಭೌಗೋಳಿಕ ಸ್ಥಾನ, ಭಾರತಕ್ಕೆ ಹೊರಗಿನವರಿಂದ ಅಪಾರ ರಕ್ಷಣೆಯನ್ನು ನೀಡಿತು. ಹೊಡೆದಾಟ ಬಡಿದಾಟದಲ್ಲೇ ಜೀವನ ಕಳೆಯುವ ಬದಲು, ಕೊಂಚ ಒಳಮುಖರಾಗಲು, ಆಧ್ಯಾತ್ಮ, ಕಲೆ, ವಿಜ್ಞಾನ ಮುಂತಾದವುಗಳನ್ನು ಶೋಧಿಸಲು ನೆರವಾಯಿತು. ಅಷ್ಟಕ್ಕೂ ‘ಹಿಂದೂ’ ಎಂಬ ಹೆಸರು ಬಂದಿದ್ದೇ ‘ಹಿ’ಮಾಲಯ+'ಇಂದು' ಮಹಾಸಾಗರ ಸೇರಿಸಿ, ಇಲ್ಲಿಯ ಜನ ಅವುಗಳು ತಮಗೆ ನೀಡುತ್ತಿರುವ ರಕ್ಷಣೆಯ ಗೌರವಾರ್ಥವಾಗಿ ತಮ್ಮನ್ನು ತಾವು ‘ಹಿಂದು’ ಎಂದು ಕರೆದುಕೊಂಡಿದ್ದರಿಂದ.

ಇಲ್ಲಿಯ ಜನ ಕಂಡುಕೊಂಡ ಒಂದು ಸತ್ಯ ಎಂದರೆ - ‘ದೇವರು’ ನಮ್ಮ ಸೃಷ್ಟಿ. ಆ ಕಾರಣಕ್ಕಾಗಿಯೇ ಭಾರತದಲ್ಲಿ 33 ಮಿಲಿಯನ್ ದೇವತೆಗಳು ಅಸ್ತಿತ್ವಕ್ಕೆ ಬಂದದ್ದು. ಹಾಗೆಂದು ಇದು ಒಂದು ‘ನಂಬಿಕೆಯ’ ಹಿನ್ನಲೆಯಿಂದ ಬಂದಿದ್ದೇ? ಅಲ್ಲ!

‘ಆಗಮ ಶಾಸ್ತ್ರ’ ಎನ್ನುವ ಒಂದು ಶಾಸ್ತ್ರವೇ ದೇವಸ್ಥಾನಗಳನ್ನು ಕಟ್ಟುವ ಕುರಿತು ಶೋಧಿಸಲ್ಪಟ್ಟಿತು. ಪ್ರಾಣಶಕ್ತಿಯನ್ನು ವಿವಿಧ ಬಗೆಯಲ್ಲಿ ಪ್ರತೀಷ್ಠೀಕರಿಸುವ ವಿಧಾನಗಳು ಶೋಧಿಸಲ್ಪಟ್ಟವು. ಸದ್ಗುರುಗಳ ಮಾತಿನಲ್ಲಿ, ನೀವು ಆಹಾರವನ್ನು ಮಾಂಸ, ಎಲುಬುಗಳಿಗೆ ಬದಲಾಯಿಸುವುದನ್ನು ಕಲಿತರೆ - ಅದು ಜೀರ್ಣ ಪ್ರಕ್ರಿಯೆ. ಮಾಂಸ, ಎಲುಬುಗಳನ್ನು ಮಣ್ಣು ಮಾಡುವುದು - ಅಂತ್ಯಸಂಸ್ಕಾರ. ನೀವು ಅದೇ ಮನುಷ್ಯರನ್ನು, ಅಥವಾ ಒಂದು ಕಲ್ಲನ್ನು, ಅಥವಾ ಒಂದು ಖಾಲಿ ಜಾಗವನ್ನು, ಒಂದು ದೈವೀಕ ಸಾಧ್ಯತೆಯನ್ನಾಗಿಸುವುದನ್ನು ಕಲಿತರೆ - ಅದು ಪ್ರಾಣ ಪ್ರತಿಷ್ಠೆ. ಈ ಅಮೋಘ ವಿಜ್ಞಾನ ಭಾರತದಲ್ಲಿ ಮೊಳಕೆಯೊಡೆದು, ಬೃಹತ್ ವೃಕ್ಷವಾಗಿ ನಿಂತಿತು. ಅಗಸ್ತ್ಯ ಮುನಿಗಳು ಕೂಡ ಪ್ರಾಣ ಪ್ರತಿಷ್ಠೀಕರಿಸಿದ ಹಲವು ಸ್ಥಳಗಳು ದಕ್ಷಿಣ ಭಾರತದಲ್ಲಿವೆ.

‘ಆಗಮ’ - ದೇವಸ್ಥಾನಗಳನ್ನು ಕಟ್ಟುವ, ಒಂದು ದೈವೀಕ ಅನುಭೂತಿಯನ್ನು ಸ್ಥಾಪಿಸುವ, ಆ ಮೂಲಕ ಸಮಾಜದ ಪ್ರಜ್ಞೆಯನ್ನು ಅಪಾರ ಮಟ್ಟದಲ್ಲಿ ಉನ್ನತೀಕರಿಸುವ ಅಮೋಘ ವಿಜ್ಞಾನದ ಆಳ-ಅಗಲವನ್ನು ಶೋಧಿಸಿತು.

ನೀವು ನೋಡಿರಬಹುದು - ದಕ್ಷಿಣ ಭಾರತದಲ್ಲಿ ಕೆಲವೆಡೆ ‘ಟೆಂಪಲ್ ಟೌನ್’ಗಳಿವೆ. ಹಾಗೆಂದರೆ, ಅದನ್ನು ಕಟ್ಟಿದ ಕಾಲಕ್ಕೆ ಜನ ಮೊದಲು ಪಟ್ಟಣ ನಿರ್ಮಿಸಿ ನಂತರ ದೇವಸ್ಥಾನ ನಿರ್ಮಿಸಲಿಲ್ಲ. ಮೊದಲು ಬೃಹತ್ ದೇವಸ್ಥಾನಗಳನ್ನು ನಿರ್ಮಿಸಿ, ಸುತ್ತಲೂ ಜೋಪಡಿಯಲ್ಲಿ ವಾಸಿಸಿದರು! ಅವರು ಮೂರ್ಖರಾ? ಖಂಡಿತ ಅಲ್ಲ. ಪ್ರಾಣಪ್ರತಿಷ್ಠಿತ ಸ್ಥಳಗಳ ಸುತ್ತ ವಾಸಿಸುವುದು, ಸಮಾಜದ ಪ್ರಜ್ಞೆಯ ಮೇಲೆ ಎಂಥಹ ಅದ್ಭುತ ಪರಿಣಾಮಗಳನ್ನು ಮಾಡಬಹುದು ಎಂಬ ಪ್ರಜ್ಞೆ ಅವರಿಗಿತ್ತು.

ಭಾರತದಲ್ಲಿ ಕಲೆ, ಸಂಸ್ಕೃತಿ, ವಿಜ್ಞಾನ, ಖಗೋಳ, ಗಣಿತ, ಜ್ಯೋತಿಷ್ಯ ಇವೆಲ್ಲವೂ ಆ ಮಟ್ಟಿಗೆ ಆಗಿನ ಕಾಲದಲ್ಲೇ ಮುಂದುವರಿಯಲು - ಪ್ರಾಣ ಪ್ರತಿಷ್ಥಿತ ಸ್ಥಳಗಳ ಕೊಡುಗೆ ಅಪಾರ. ಭಾರತದಲ್ಲಿ ಎಲ್ಲೋ ಒಂದಿಬ್ಬರು ವಿಜ್ಞಾನಿಗಳು ಆಗಿ ಹೋಗಲಿಲ್ಲ. ಒಂದೆರಡು ಆತ್ಮಜ್ಞಾನಿಗಳು ಸಂಭವಿಸಲಿಲ್ಲ. ಕಲೆ, ವಿಜ್ಞಾನಗಳ ಒಂದೆರಡು ಭಾಗವನ್ನಷ್ಟೇ ಈ ನಾಗರೀಕತೆ ಸಂಶೋಧಿಸಿದ್ದಲ್ಲ. ಕಲೆಗೆ ಬಂದರೆ - ಶಾಸ್ತ್ರೀಯ ಸಂಗೀತ, ಭರತನಾಟ್ಯ ಇವೆಲ್ಲ ಸುಮ್ಮನೆ ಮನಸ್ಸಿಗೆ ಬಂದ ರೀತಿಯಲ್ಲಿ ಮಾಡಿದ್ದಲ್ಲ. ಹೊರಡುವ ಸ್ವರಗಳ, ನೃತ್ಯಗಳಲ್ಲಿ ರೂಪಿತವಾಗುವ ಚಲನೆಗಳ ಹಿಂದೆ ದೊಡ್ಡ ವ್ಯವಸ್ಥಿತ ಜ್ಞಾನದ ಭಂಡಾರವೇ ಇದೆ! ನಾನು ಹೇಳಲು ಹೊರಟಿರುವುದು ಏನೆಂದರೆ, ಇವೆಲ್ಲವುಗಳಲ್ಲಿ ಉನ್ನತವಾಗಿದ್ದ ಸಮಾಜಗಳನ್ನೇ ಈ ನೆಲ ಸೃಷ್ಟಿಸಿತು, ಒಂದೆರಡು ವ್ಯಕ್ತಿಗಳನ್ನಲ್ಲ! ಇವೆಲ್ಲ ಸಾಧ್ಯವಾಗಬೇಕು ಎಂದರೆ, ಮಾನವ ಪ್ರಜ್ಞೆ (consciousness) ಅನ್ನು ಪೋಷಿಸುವ, ನೀರೆರೆದು ಬೆಳೆಸುವ ಪ್ರಾಣಪ್ರತಿಷ್ಠಿತ ಸ್ಥಳಗಳು ಬೇಕು ಎಂಬ ಜ್ಞಾನ ಆ ಸಮಾಜಗಳಿಗೆ ಇತ್ತು. ಅದಕ್ಕೇ ದೇಶದ ತುಂಬೆಲ್ಲ ಸಹಸ್ರಾರು ದೇವಸ್ಥಾನಗಳನ್ನು ಕಟ್ಟಿದ್ದು, ರಾಜರು ಸ್ವತಃ ಕಾಳಜಿ ವಹಿಸಿ, ಭಕ್ತಿಯಿಂದ ಕಟ್ಟಿಸಿದ್ದು.

ಆದರೆ ಇಂದು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಈ ವಿಷಯಗಳನ್ನು ತಿಳಿದ ಜನರ ಸಂಖ್ಯೆ ಕೂಡ ಕಡಿಮೆಯೇ! ಹಿಂದೂಗಳಲ್ಲೇ ದೇವಸ್ಥಾನ ಕೇವಲ ’ಒಂದು ನಂಬಿಕೆ’ ಅಂದುಕೊಂಡು ವಾದಿಸುವವರಿದ್ದಾರೆ. ಈಗ ದೇವಸ್ಥಾನಗಳನ್ನು ಕಟ್ಟುವ ಪರಿಯೂ ಹಾಗೇ ಆಗಿದೆಯೇ? ಗೊತ್ತಿಲ್ಲ.

ಆದರೆ ಇವೆಲ್ಲವನ್ನು ಹೇಳಬೇಕು ಅನ್ನಿಸಿತು. ಕಂಪ್ಯೂಟರ್, ಫೋನ್, ರಾಕೆಟ್, ಮತ್ತೊಂದು ಮಾತ್ರ ವಿಜ್ಞಾನ ಅಂದುಕೊಂಡಿರುವ ನಮಗೆ, ಇಲ್ಲ, ಅವುಗಳಿಗಿಂತ ಗಹನವಾದ, ಬದುಕಿಗೆ ಹತ್ತಿರವಾದ, ಸರ್ವರ ಏಳಿಗೆ ಬಯಸುವ ಅಗಾಧ ಜ್ಞಾನ, ವಿಜ್ಞಾನಗಳು ನಮ್ಮಲ್ಲಿದ್ದವು ಎಂದು ನೆನಪಿಸುವ ಬಯಕೆಯಾಯಿತು. ಮತ್ತೊಮ್ಮೆ ಆ ಜ್ಞಾನಗಳು ಜೀವಂತವಾದರೆ, ಎಷ್ಟು ಚೆನ್ನಾಗಿರುತ್ತೆ ಅಲ್ಲವೇ? ಆದರೆ ಅದು ನಾಳೆ ಬೆಳಗಾಗುವುದರಲ್ಲಿ ಸಂಭವಿಸುವುದಿಲ್ಲ. ಅದನ್ನು ಕಾಲಕ್ರಮದಲ್ಲಿ ಆಗಿಸುವ, ಅದರ ಮಹತ್ವವನ್ನು ನಮ್ಮ ಹೃದಯಗಳಲ್ಲಿ ಜೀವಂತವಾಗಿರಿಸಿಕೊಂಡು ಬದುಕುವ, ಅದಕ್ಕಾಗಿ ಶ್ರಮಿಸುವ ಬದ್ಧತೆ ನಮ್ಮಲ್ಲಿ ಇದೆಯೇ?



ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...