Monday, May 12, 2025


ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್ತು

ಆಮೇಲೆ ಅದಾಗಿ 10-15 ನಿಮಿಷಕ್ಕೆಲ್ಲ ನಮ್ಮ Foreig Secy ವಿಕ್ರಮ್ ಮಿಸ್ರಿಯವರು ಮಾಧ್ಯಮದ ಮುಂದೆ ಬಂದು ನಾವೂ ceasefire ಗೆ ಒಪ್ಪಿರುವುದನ್ನು ತಿಳಿಸಿದಾಗ ತೀವ್ರ ಹತಾಶೆಯಾಯಿತು… ಅದಾದ ನಂತರ ಆಫೀಸ್ ಹತ್ತಿರದಲ್ಲೇ ಚಿಕ್ಕ ವಾಕ್ ಹೋಗಿ ಬಂದು, ಮತ್ತೊಂದಿಷ್ಟು ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದರೂ ಮನಸ್ಸಲ್ಲಿ ಒಂಥರಾ ಹತಾಶೆ..
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಅಂತ.
ಅಷ್ಟಕ್ಕೂ ಆವತ್ತು Operation Sindoor ಗೆ ನಿಂತು ಹೋಗಿದ್ದರೆ… ಅಲ್ಲಿಗೆ ಸರಿಯಾಗಿರುತ್ತಿತ್ತು. ನಂತರ ಆವತ್ತು ರಾತ್ರಿಯಿಂದ ಪ್ರತಿ ರಾತ್ರಿ ಪಾಕಿಸ್ತಾನ ನೂರಾರು ಶಸ್ತ್ರಸಹಿತ ಡ್ರೋನ್ ಗಳನ್ನು ಹಾರಿಸುವುದು … ನಮ್ಮ ಗಡಿಯಂಚಿನಲ್ಲಿ ಬದುಕಿರುವ ನಾಗರಿಕರ ಮನೆಗಳತ್ತ ಆರ್ಟಿಲರಿ ಶೆಲ್ ಗಳನ್ನು ಸಿಡಿಸುವುದು ಮಾಡುತ್ತಲೇ ಬಂತು.
ನಮ್ಮ ಕಡೆಯಿಂದ ಬಲವಾದ ಪ್ರತಿಕ್ರಿಯೆ ಹೋಗುತ್ತೆ ಅಂತ ಎಲ್ಲರಿಗೂ ಇತ್ತು… ಮೇ 7-8 ರ ರಾತ್ರಿಯಂತೂ ಯಾವ ಮಟ್ಟಕ್ಕೆ ಹೋಯಿತು ಎಂದರೆ ಇನ್ನೇನು ಕರಾಚಿಯ ಬಂದರಿಗೆ ನಮ್ಮ ಮಿಸೈಲ್ ಗಳು ಹೋಗಿ ಬಿದ್ದವು… ಕರಾಚಿ ಬಂದರು ಹೊತ್ತಿ ಉರಿಯುತ್ತಿದೆ… 1971ರಲ್ಲಿ ನಮ್ಮ ನೌಕಾಪಡೆಯ ಹೊಡೆತಕ್ಕೆ ಸಿಕ್ಕ ಕರಾಚಿ ಬಂದರು, ಒಂದು ವಾರದ ತನಕ ಉರಿಯುತ್ತಲೇ ಇತ್ತು… ಈಗ ಇತಿಹಾಸ ಮರುಕಳಿಸುತ್ತೆ ಅಂತೆಲ್ಲ ಸುದ್ದಿಗಳು ಬರತೊಡಗಿದವು… ಮತ್ತು ಟ್ವಿಟ್ಟರ್ ನಲ್ಲಿ ಇದು ಬಹಳ ಸಂಚಲನವನ್ನೇ ಮೂಡಿಸಿತು. ಆದರೆ ಬೆಳಿಗ್ಗೆ ಎದ್ದು ನೋಡಿದರೆ ಹಾಗೆ ಆದ ಅಧಿಕೃತ ಮಾಹಿತಿಯೇನು ಬಂದಿರಲಿಲ್ಲ.
ಆದರೆ ಲಾಹೋರ್ ನಲ್ಲಿ ಬೆಂಕಿ ಕಾಣಿಸಿದೆಯಂತೆ… ರಾವಲ್ಪಿಂಡಿಯ ಕ್ರಿಕೆಟ್ ಮೈದಾನ ಬಾಜುವಿನಲ್ಲೇ ನಮ್ಮ ಬಾಂಬು ಬಿದ್ದಿದೆಯಂತೆ.. ಮತ್ತಷ್ಟು ಪಾಕಿಸ್ತಾನೀ air base ಗಳು ಉಡೀಸ್ ಆಗಿವೆಯಂತೆ ಅಂತೆಲ್ಲ ಸುದ್ದಿಗಳು ಬಂದವು…
ನಮಗೆ ಒಂಥರ ಕಸಿವಿಸಿ. ನಮ್ಮ ಸೈನ್ಯ ಪಾಕಿಸ್ತಾನಿ ಸೈನ್ಯಕ್ಕಿಂತ ನೂರು ಪಟ್ಟು ಜಾಸ್ತಿ ಶಕ್ತಿಶಾಲಿ ಎಂಬುದು ನಮಗೆ ಗೊತ್ತು. ಆದರೂ ಅವರ ಇಷ್ಟೆಲ್ಲ ಆಟೋಟಾಪಗಳ ನಡುವೆ ನಾವು ಅಂಥ response ಅನ್ನೇನು ಕೊಟ್ಟಿಲ್ಲವಲ್ಲ ಅನ್ನುವ ಕಸಿವಿಸಿ.
ನಂತರ, ಇಲ್ಲ ಡ್ರೋನ್ ಗಳು ಮತ್ತೊಂದು ಬಂದು ಮುಗಿಯಲಿ… ಶತ್ರುವಿನ ಅಸ್ತ್ರ ಖಾಲಿಯಾದ ನಂತರ ನಮ್ಮವರು ದಾಳಿ ನಡೆಸುತ್ತಾರೆ ಎನ್ನುವ ವಾದ ಬಂತು. ಇರಬಹುದು.. Makes sense ಅನ್ನಿಸಿತು
ಆದರೆ ಇವೆಲ್ಲದರ ಮಧ್ಯೆ ಗಮನ ಸೆಳೆದು ನಮ್ಮ ಎದೆಯುಬ್ಬಿಸಿದ್ದು ನಮ್ಮ Air Defense Systems. ನಾವು Air Offense ಎಷ್ಟು ಮಾಡಿದ್ದೇವೆ (9 ಉಗ್ರ ಕ್ಯಾಂಪ್ ಗಳನ್ನು ನೆಲಗೆಡವಿದ ನಂತರ) ಅನ್ನೋದರ ಬಗ್ಗೆ clarity ಇರಲಿಲ್ಲ. ಆದರೆ Air Defense ಎಷ್ಟು ಅದ್ಭುತವಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ ಕಣ್ಣಿಗೇ ಕಾಣಿಸುತ್ತಿತ್ತು. ಪಾಕಿನ ಸಹದ್ದಿನಿಂದ ಒಳಬರುವ ಮಿಣುಕು ಡ್ರೋನ್ ಗಳು ಹತಾಶವಾದ ಉಲ್ಕಾಪಾತಗಳಂತೆ ಗಳಗಳನೆ ನೆಲಕ್ಕುರುಳಿತ್ತಿದ್ದು ನೋಡಿ ಅದೆಂತದೋ ಒಂದು ಸಂತೋಷ. ನಮ್ಮಲ್ಲೂ ಇಂತಹ system ಗಳಿವೆ ಎಂಬುದರ ಬಗ್ಗೆ ಹೆಮ್ಮೆ.

(ಚಿತ್ರ: ಭಾರತೀಯ ಏರ್ ಡಿಫೆನ್ಸ್ ಸಿಸ್ಟಮ್ ಗಳು ಪಾಕಿಸ್ತಾನಿ ಡ್ರೋನ್ ಗಳನ್ನು ಕೆಡುವುತ್ತಿರುವ ದೃಶ್ಯ)
ಇವೆಲ್ಲದರ ಮಧ್ಯೆ ಅತ್ಯಂತ ಹೆಚ್ಚಿಗೆ ಕಾಡಿದ್ದು ಗಡಿಯಂಚಿನಲ್ಲಿ ವಾಸವಿರುವ ನಮ್ಮ 40 (ಅಥವಾ ಸ್ವಲ್ಪ ಹೆಚ್ಚು) ನಾಗರೀಕರು ಪಾಕಿಸ್ತಾನೀ ಶೆಲ್ಲಿಂಗ್ ಗೆ ಮೃತಪಟ್ಟಿದ್ದು.
ನೋಡಿ ಪಾಕಿಸ್ತಾನ ಮತ್ತು ಅಲ್ಲಿಯ ಆಡಳಿತಗಾರರು ಎಂತಹ ಆತ್ಮಸಾಕ್ಷಿಯಿಲ್ಲದ ಜನ ಎಂದು. ಒಂದು, ನಮ್ಮ ಸೇನೆಯ ಪ್ರತ್ಯುತ್ತರ ತಾಳಲಾರದೆ ನಮ್ಮ ಅಮಾಯಕ ನಿರಾಯುಧ ನಾಗರೀಕರಿಗೆ ಗುರಿಯಿಟ್ಟು ಶೆಲ್ಲಿಂಗ್ ಮಾಡಿದ್ದು. ಎರಡು, ಅಂದು ರಾತ್ರಿ ತನ್ನ ವಾಯುಪ್ರದೇಶ (Airspace) ಅನ್ನು ಮುಚ್ಚದೇ ನಾಗರೀಕ ವಿಮಾನಗಳಿಗೆ ಹಾರಲು ಬಿಟ್ಟು, ಭಾರತದ ಪ್ರತಿದಾಳಿ ಕ್ಷಿಪಣಿಗಳು ಅವ್ಯಾವುದಕ್ಕದರೂ ಮೊಟಕಿ, ಬಿದ್ದು, ಅಂತರಾಷ್ಟ್ರೀಯ ಸಮುದಾಯದ ಮುಂದೆ “ನೋಡಿ, ಭಾರತ ನಾಗರೀಕ ವಿಮಾನಕ್ಕೆ ಹೊಡೆದಿದೆ” ಎಂದು ಕಿರುಚಲು ತಯಾರಿ ನಡೆಸಿದ್ದು. ಮೂರು, ತನ್ನ ರಾಕೆಟ್ ಲಾಂಚರ್ ಗಳನ್ನು ತನ್ನ ನಾಗರೀಕರಿರುವೆಡೆಗೆ ತಂದು ಅಲ್ಲಿಂದ ಫೈರ್ ಮಾಡಿದ್ದು - ಏಕೆಂದರೆ ಭಾರತ ಆ ರಾಕೆಟ್ ಗಳ ಮೂಲ ಹುಡುಕಿ ದಾಳಿ ಮಾಡಿದರೆ ನಾಗರೀಕರಿಗೆ ಹಾನಿಯಾಗುತ್ತದೆ, ಅನೇಕರು ಸಾವನ್ನಪ್ಪಬಹುದು ಕೂಡ. ಆಗ ಮತ್ತೆ ಅಂತರಾಷ್ಟ್ರೀಯ ಸಮುದಾಯದ ಮುಂದೆ ಗೋಳಿಡಬಹುದು ಎಂದು. ನೋಡಿ, ಅದು ಎಂತಹ ದರಿದ್ರ ರಾಷ್ಟ್ರವೆಂದರೆ, ತನ್ನ ನಾಗರೀಕರ ಜೀವಗಳಿಗೆ ಅದು ಬೆಲೆ ಕೊಡುವುದಿಲ್ಲ!
ಇವೆಲ್ಲವೂ ಆಗಿ, ನಮ್ಮವರು ಹೇಗೆ ಪ್ರತಿಕ್ರಿಯೆ/ಪ್ರತಿದಾಳಿ ನಡೆಸುತ್ತರೆಂದು ನೀರಿಕ್ಷೆಯಲ್ಲಿರುವಾಗ ಬಂತು ನೋಡಿ ಈ CEASEFIRE ಎಂಬ ಕ್ಷಿಪಣಿ - ನಮ್ಮೊಳಗಿದ್ದ ನಿರೀಕ್ಷೆಯ ಫೈರ್ ಕುಸಿದುಹೋಯಿತು. ಆ ಕ್ಷಣಕ್ಕೆ ಅದನ್ನು ಒಪ್ಪಲಾಗಲಿಲ್ಲ.
In fact, ಇವತ್ತು ಸಂಜೆ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ 3 ಉನ್ನತ ಅಧಿಕಾರಿಗಳು ಬಂದು Press Brief ಕೊಡುವವರೆಗೂ ಇದು ಏಕೆ, ಹೇಗೆ, ಏನು ಎಂಬುದನ್ನು ಜೀರ್ಣಿಸಿಕೊಳ್ಳಲು ಆಗಿರಲಿಲ್ಲ.
ಆದರೆ, Indian Armed Forces - as professional as they are, ಬಂದು ಅವರು ಕಳೆದ 3-4 ದಿನಗಳಲ್ಲಿ ಮಾಡಿದ ಎಲ್ಲ Neutralizations ಮತ್ತು ಪ್ರತಿದಾಳಿಗಳನ್ನು pin-to-pin ಸಾಕ್ಷ್ಯಗಳ ಮೂಲಕ ತಿಳಿಸಿದಾಗ - ಏಕೆ, ಏನು, ಹೇಗೆ, ಎತ್ತ ಎಂಬುದು ತಕ್ಕ ಮಟ್ಟಿಗೆ ಮನವರಿಕೆಯಾಯಿತು. ಒಂಥರ ಸಮಾಧಾನದ ನಿಟ್ಟುಸಿರು.

Operation Sindoor - ಅವತ್ತು ರಾತ್ರಿ 9 ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಿದ್ದು ಬಿಡಿ, ಅದನ್ನು ಮರುದಿನವೇ ಸಾಕ್ಷಿ ಸಮೇತ ಜಗತ್ತಿನ ಮುಂದಿಟ್ಟಾಗಿದೆ. ಆದರೆ ಅದರ ನಂತರ ಮಾಡಿದ ಎಲ್ಲ ಪ್ರತಿದಾಳಿಗಳ ವಿವರಗಳು ಇಂದು ಜಗಜ್ಜಾಹೀರಾಯಿತು.
ಅವರ ಕಡೆಯಿಂದ ಡ್ರೋನ್ ಗಳು ಹಾರಿಬಂದ ಮೊದಲ ದಿನ ಅವೆಲ್ಲವನ್ನು ನ್ಯೂಟ್ರಲೈಸ್ ಮಾಡಿ, “ನಾವು ಸುಮ್ಮನಿರಲ್ಲ” ಎಂಬ ಸಂದೇಶ ಕೊಡಲು 2-3 airbase ಗಳನ್ನು ಗುರಿಯಾಗಿಸಿ ನಮ್ಮವರು ದಾಳಿ ಮಾಡಿದ್ದಾರೆ. ಅದರಲ್ಲಿ ಲಾಹೋರ್ ಕೂಡ ಒಂದು. ಲಾಹೋರ್ ನಲ್ಲಿರುವ ಏರ್ ಬೇಸ್ ಗೆ ನಮ್ಮವರು ಮಿಸೈಲ್ ಹೊಡೆದದ್ದು ಅವರಿಗೆ ದೊಡ್ಡ ಮುಖಭಂಗ.
ಆದರೆ ಪಾಕಿಸ್ತಾನೀ ಮನಸ್ಥಿತಿ ಗೊತ್ತಲ್ಲ. ಎರಡನೇ ದಿನವೂ ಡ್ರೋನ್ ಗಳು ಹಾರಿಬಂದವು. ಆದರೆ ನಮ್ಮ ಕಡೆಯಿದ ಅಂಥ ಪ್ರತಿಸ್ಪಂದನೆ ಆವತ್ತಿರಲ್ಲಿ ಅನ್ನಿಸುತ್ತೆ. ಮತ್ತೆ ಮೂರನೇ ದಿನವೂ ಬಂದವು (ಅಂದರೆ ಶುಕ್ರವಾರ ರಾತ್ರಿ). ಆಗ ಮತ್ತೆ ನಮ್ಮ AirForce ಅತ್ಯಂತ ದೊಡ್ದ ಮಟ್ಟದಲ್ಲಿ ಪ್ರತಿದಾಳಿ ನಡೆಸಿತು. Rafiqui, Murid, Sukkur, Sialkot, Pasrur, Chunian, Sargodha, Skardu, Bholari, Jacobaba ಮುಂತಾದ ವಾಯುನೆಲೆಗಳಲ್ಲಿ ಭಾರತೀಯ ಕ್ಷಿಪಣಿಗಳು ಬೆಂಕಿ ಹೊತ್ತಿಸಿದವು. ಆದರೆ ಎಲ್ಲಕ್ಕಿಂತ ಪ್ರಮುಖವಾಗಿ ಅವರ ರಾಜಧಾನಿಯಲ್ಲೇ ಇರುವ, ಅವರ ವಾಯುಪಡೆಯ ಅತ್ಯಂತ ಪ್ರಮುಖ ವಾಯುನೆಲೆ ಇಸ್ಲಮಾಬಾದ್ ನ ಚಕ್ಲಾಲಾ ನೂರ್ ಖಾನ್ ಬೇಸ್ ಮೇಲೆ ದಾಳಿಯಾಯಿತು. ಇದು ಪಾಕಿಸ್ತಾನೀಯರಿಗೆ ನುಂಗಲಾರದ ತುತ್ತಾಯಿತು. Indian Airforce just overwhelmed them.




ಬಹುಶಃ ಈ ಎಸ್ಕಲೇಶನ್ ಅನ್ನು ಹೀಗೆಯೇ ಮುಂದುವರಿಸಿದರೆ ನಮ್ಮ ನ್ಯೂಕ್ಲಿಯರ್ ಖಜಾನೆಗೂ ನಾಳೆ ಕ್ಷಿಪಣಿಗಳು ಬಂದು ಬೀಳಬಹುದು ಎಂಬ ಕಟುಸತ್ಯದ ಅರಿವು ಪಾಕಿಸ್ತಾನಕ್ಕಾಯಿತು. ಅಮೆರಿಕೆಗೆ ಅಂಗಲಾಚಿಕೊಂಡು ಯುದ್ಧ ನಿಲ್ಲಿಸುವಂತೆ ಬೇಡಿಕೊಂಡಿತು. ಅಮೇರಿಕಾ ಭಾರತಕ್ಕೆ ಕರೆ ಮಾಡಿ ಪಾಕಿಸ್ತಾನದ ಅಳಲನ್ನು ತಿಳಿಸಿತು. ಭಾರತೀಯರು ಅವರಿಗೇ ತಮ್ಮ ಬಳಿ ಮಾತನಾಡಲು ತಿಳಿಸುವಂತೆ ಸೂಚಿಸಿದರು. ನಾಚಿಕೆಯೇ ಇಲ್ಲದ ಪಾಕಿ ಅಧಿಕಾರಿಗಳು ನಮ್ಮ DSMO ಗೆ ಕರೆಮಾಡಿ ತಮ್ಮ ನಿಲುವನ್ನು ತಿಳಿಸಿದರು.
ನಮ್ಮ ಪ್ರಾಥಮಿಕ ಗುರಿ ಯುದ್ಧವಾಗಿರಲ್ಲಿ. ಆ ಉಗ್ರ ನೆಲೆಗಳನ್ನು ನೆಲಸಮಮಾಡಿ ಅವರನ್ನು ಕೊಲ್ಲುವುದಾಗಿತ್ತು. ನಾವದನ್ನು ಆವತ್ತೇ ಮಾಡಿದ್ದೇವೆ. ಯುದ್ಧದ ವಾತವರಣವನ್ನು ಸೃಷ್ಟಿಸಿದ್ದು ನೀವು, ಹೊಡೆಸಿಕೊಂಡಿದ್ದು ನೀವು ಎಂದು ಸೇನೆ ಪಾಕಿಸ್ತಾನಕ್ಕೆ ಹೇಳಿತು. ಭಾರತ ಸರ್ಕಾರವೂ ಇದಕ್ಕೆ ಒಪ್ಪಿಗೆ ಸೂಚಿಸಿತು.
ನಾವು ಈ ಆಪರೇಶನ್ ಅನ್ನು ಯುದ್ಧ ಮಾಡಬೇಕೆಂದು ಶುರು ಮಾಡಿಲ್ಲ. But if Pakistan wants to go up in the Escalation ladder, India will retaliate and escalate to whatever extent it demands, ಅಷ್ಟೇ ಆಗಿದ್ದು. ಅಲ್ಲಿಗೆ ಮುಗಿಯಿತು. ಇದರಲ್ಲಿ ಪಾಕಿಸ್ತಾನದ ಭೂಸೇನಾ 40-50 ಸೈನಿಕರು artillery ಫೈರಿಂಗ್ ನಲ್ಲಿ ಹೋಗಿದ್ದಾರೆ ಎಂದು ತಿಳಿಯಿತು. ಭಾರತ ಮಾತೆಯೂ ತನ್ನ 5 ವೀರ ಸೈನಿಕ ಸುಪುತ್ರರನ್ನು ಕಳೆದುಕೊಂಡಿತು.
ಆದರೆ ಗಡಿಯಂಚಿನಲ್ಲಿ ಬದುಕು ಕಟ್ಟಿಕೊಂಡಿದ್ದ 40ಕ್ಕೂ ಹೆಚ್ಚು ನಮ್ಮ ನಾಗರೀಕರ ಸಾವಿಗೆ ನ್ಯಾಯ ಸಿಗೋದು ಯಾವಾಗ? ಕಾದು ನೋಡಬೇಕು.
ನಮ್ಮ ಸೈನ್ಯದಲ್ಲಿ ನಂಬಿಕೆಯಿಡಿ. ನಮಗಿಂತ ಚೆನ್ನಾಗಿ ಅವರಿಗೆ ಗೊತ್ತು.


Wednesday, May 10, 2023

ಆ ಪಕ್ಷ, ಈ ಪಕ್ಷವಲ್ಲ - ಆಡಳಿತದಲ್ಲಿರಬೇಕಿರುವುದು 'ಪ್ರಜಾಪ್ರಭುತ್ವ'!


ಮತದಾನ ಮುಗಿದಿದೆ. ಕರ್ನಾಟಕ ವಿಧಾನಸಭೆಯ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಮತದಾರ ಗುಪ್ತವಾಗಿ ತೀರ್ಮಾನಿಸಿದ್ದಾನೆ. 

ಪ್ರಜಾಪ್ರಭುತ್ವ ಭಾರತದಲ್ಲಿ ಬಂದು 50 ವರ್ಷಗಳ ನಂತರ ಜನಿಸಿರುವ ನನ್ನಂತವರಿಗೆ, ಅಥವಾ ಅದು ಬಂದ ನಂತರ 10-20-30-40 ವರ್ಷಗಳ ನಂತರ ಜನಿಸಿರುವ ಓದುಗರಿಗೆ ಪ್ರಜಾಪ್ರಭುತ್ವವನ್ನು ಪಡೆಯುವಲ್ಲಿ ಹಿಂದಿನ ಜನಾಂಗಗಳು ಪಟ್ಟ ಕಷ್ಟ ಎಷ್ಟರ ಮಟ್ಟಿಗೆ ಅರ್ಥವಾಗುತ್ತೆ ಗೊತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಯಾರನ್ನು ಬೆಂಬಲಿಸುತ್ತಾರೋ ಅವರು ರಾಜನಾಗುವ, ರಾಜನಾದ ನಂತರವೂ ಅವಶ್ಯವಿದ್ದಲ್ಲಿ ಅವನನ್ನು ಮುಂದಿನ ಐದೇ ವರ್ಷಗಳಲ್ಲಿ ಅಧಿಕಾರದಿಂದ ಕೆಳಗಿಳಿಸಬಲ್ಲ ಅಧಿಕಾರವನ್ನು ಜನರಿಗೆ ನೀಡಿರುವ ಈ ವ್ಯವಸ್ಥೆ ಸಾಮಾನ್ಯವಾದುದಲ್ಲ.

ಆದರೆ ವ್ಯವಸ್ಥೆ ಎಂತದ್ದೇ ಆದರೂ ಅದನ್ನು ಸರಿಯಾಗಿ, ಸಮರ್ಪಕವಾಗಿ ಬಳಸಿಕೊಳ್ಳುವ ಜನರಿಲ್ಲದಿದ್ದರೆ ಏನು ಪ್ರಯೋಜನ? ನಾನು ನನ್ನ ಜಾತಿಯವರನ್ನು ಮಾತ್ರ ಗೆಲ್ಲಿಸುತ್ತೇನೆ, ನನ್ನ ಜಾತಿಯವನು ಮಾತ್ರ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು - ಹೀಗೆ, ನಾವು ಇದರ ಸುತ್ತವೇ ಸುತ್ತಿದರೆ ಇದು ಮತ್ತೆ ಒಂದೇ ಕುಟುಂಬದವರು(ಈಗ ಒಂದೇ ಜಾತಿಯವರು) ರಾಜನಾಗುವುದಕ್ಕಿಂತ ಹೇಗೆ ಭಿನ್ನವಾದಂತಾಗುತ್ತದೆ? Democracy ಅಥವಾ ಪ್ರಜಾಪ್ರಭುತ್ವ ಪ್ರಜೆಗೆ ಕೊಟ್ಟಿರುವ ಅತ್ಯಂತ ದೊಡ್ದ ಶಕ್ತಿ ಎಂದರೆ ಅವನಿಗೆ ‘ಯೋಚಿಸುವ ಶಕ್ತಿ’ಯನ್ನು ಕೊಟ್ಟಿದ್ದು. ಪ್ರತಿ ಚುನಾವಣೆಯಲ್ಲೂ ಅವನು ಯೋಚಿಸಿ ತನ್ನ ರಾಜ ಯಾರಾಗಬೇಕೆಂದು ನಿರ್ಧರಿಸಬಹುದು. ಕೆಲಸ ಮಾಡಿಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ಅವನನ್ನು ಬೀಳಿಸಬಹುದು. ಆದರೆ ಆತ ನನ್ನ ಜಾತಿಯವ ಅಂತ ಅವ ಕೆಲಸ ಮಾಡಲಿ, ಬಿಡಲಿ ಅವನನ್ನೇ ಗೆಲ್ಲಿಸಬೇಕೆಂದರೆ - ಇಷ್ಟೆಲ್ಲ ಕಷ್ಟಪಟ್ಟು ಪ್ರಜಾಪ್ರಭುತ್ವವನ್ನು ತಂದಿರೋದು ಏಕೆ?

ರಾಜ್ಯದ ಮುಖ್ಯಮಂತ್ರಿಯ ವಿಚಾರದಲ್ಲೂ ಅಷ್ಟೇ. ರಾಜ್ಯದ ಬಗ್ಗೆ ತಿಳಿದುಕೊಂಡಿರುವ, ರಾಜ್ಯದ ಉದ್ದಗಲವನ್ನು ಸಂಚರಿಸಿ ಅದರ ನಾಡಿಮಿಡಿತವನ್ನು ಅರಿತಿರುವ, ರಾಜ್ಯದ ಬಗ್ಗೆ ಮುಂದಾಲೋಚನೆಯಿರುವ, ವ್ಯವಹಾರದಲ್ಲಿ, ಆಡಳಿತದಲ್ಲಿ ಚಾಣಾಕ್ಷನಾಗಿರುವವರು ರಾಜ್ಯದ ಮುಖ್ಯಮಂತ್ರಿಯಾಗಬೇಕೋ, ಅಥವಾ ಒಬ್ಬರು ಒಂದು ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೋ? ಹಿಂದಿನ ಕಾಲದಲ್ಲಿ ಪುರೋಹಿತನ ಮಗ ಮಾತ್ರ ಪುರೋಹಿತನಾಗಬೇಕಿತ್ತು. ಬಡಗಿಯ ಮಗ ಬಡಗಿಯೇ ಆಗಬೇಕಿತ್ತು. ಕ್ಷತ್ರಿಯರು ಮಾತ್ರ ರಾಜನಾಗೋ ಕನಸು ಕಾಣಬಹುದಿತ್ತು. ಈಗಲೂ ಒಂದು ಸಮುದಾಯದವರು ಮಾತ್ರ ಮುಖ್ಯಮಂತ್ರಿಯಾಗಬೇಕು ಎಂದರೆ, ಆಗಿನದಕ್ಕೂ ಈಗಿನದಕ್ಕೂ ವ್ಯತ್ಯಾಸವೇನು? ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆಯೇ, ಮುಮ್ಮುಖವಾಗೋ?

ಒಬ್ಬ ನಾಯಕನಿಗೆ, ಆತ ಕಾರ್ಪೋರೇಟರ್ ಇರಬಹುದು, ಎಮ್ಮೆಲ್ಲೆ ಇರಬಹುದು, ಮುಖ್ಯಮಂತ್ರಿಯಿರಬಹುದು, ಅಥವಾ ಒಂದು ಬಿಸಿನೆಸ್ ಲೀಡರ್ ಇರಬಹುದು, ಆತನಿಗೆ ಇರಬೇಕಾದ ಏಕೈಕ ಗುಣ ಎಂದರೆ ಒಳಗೂಡಿಸಿಕೊಳ್ಳುವಿಕೆ. ಇದಕ್ಕೆ ಇಂಗ್ಲೀಷಿನಲ್ಲಿ Inclusiveness ಎನ್ನುತ್ತಾರೆ. ಅಂದರೆ, ಬೇರೆಯವರನ್ನು ನಮ್ಮವರು ಎಂದು ಒಳಗೂಡಿಸಿಕೊಳ್ಳುವುದು. ಅವನು ಯಾರೇ ಆಗಿರಲಿ, ಎಡಪಂಥೀಯ, ಬಲಪಂಥೀಯ, ಆ ಪಕ್ಷ, ಈ ಪಕ್ಷ, ಮನುಷ್ಯ, ಪ್ರಾಣಿ, ಗಿಡ-ಮರ, ಕ್ರಿಮಿ-ಕೀಟ ಹೀಗೆ ಅದು ಏನೇ ಆಗಿರಲಿ, ಅವೆಲ್ಲವನ್ನೂ ತನ್ನ ಭಾಗವಾಗಿ ‘ಒಳಗೂಡಿಸಿಕೊಳ್ಳುವ’ ಗುಣ ಒಬ್ಬ ನಾಯಕನಿಗೆ ಇರಬೇಕು. ಆಗ ಮಾತ್ರ ಅವನು ಮನುಷ್ಯರಿಗೆ, ಪ್ರಾಣಿಗಳಿಗೆ, ಪರಿಸರಕ್ಕೆ, ಭೂಮಿಗೆ ಒಳಿತು ಮಾಡಲು ಸಾಧ್ಯ. ಒಬ್ಬರು ಎಷ್ಟು ಸಂಗತಿಗಳನ್ನು ಒಳಗೂಡಿಸಿಕೊಳ್ಳುತ್ತಾರೋ ಅಷ್ಟು ದೊಡ್ಡವರಾಗುತ್ತಾರೆ, ಎಷ್ಟನ್ನು ವಿಂಗಡಿಸಿ ಪ್ರತ್ಯೇಕಿಸುತ್ತಾರೋ ಅಷ್ಟು ತಮ್ಮೊಳಗೇ ಚಿಕ್ಕವರಾಗುತ್ತಾರೆ.

ಹಾಗೆಯೇ ಮತದಾರ ಪ್ರಭುಗಳು ವೋಟು ಹಾಕಿ ಐದು ವರ್ಷ ಸುಮ್ಮನೆ ಕುಳಿತರೆ actually ಮತ್ತೆ ಅದು ‘ಪ್ರಜಾಪ್ರಭುತ್ವ’ ಅಲ್ಲ(ಕೆಲವರು ವೋಟನ್ನೂ ಹಾಕುವುದಿಲ್ಲ, ಅಂಥವರ ವಿಷಯ ಬಿಡಿ).  ಪ್ರಜಾಪ್ರಭುತ್ವ ಎಂದರೆ ಸಕ್ರಿಯವಾಗಿ ಭಾಗವಹಿಸುವಿಕೆ. ನನ್ನ ವಾರ್ಡಿನಲ್ಲಿ, ನನ್ನ ಕ್ಷೇತ್ರದಲ್ಲಿ ಏನಾಗುತ್ತಿದೆ, ಏನಾಗಬೇಕು ಎಲ್ಲವೂ ಪ್ರಜೆಗೆ ತಿಳಿದಿರಬೇಕು. ಪ್ರಜೆಗಳು ಒಗ್ಗಟಿನಲ್ಲಿ ಪ್ರತಿನಿಧಿಗೆ ಆಗಾಗ ಮಾರ್ಗದರ್ಶಿಸುತ್ತಿರಬೇಕು. ನನಗೆ ಗೊತ್ತು - ಒಬ್ಬ ಯಾರೋ ಹೋಗಿ ಹೇಳಿದರೆ ಕೆಲಸವಾಗೋಲ್ಲ. ಪ್ರಜ್ಞಾವಂತ ಪ್ರಜೆಗಳು ಒಕ್ಕೂಟಗಳನ್ನು ರಚಿಸಿಕೊಂಡು ಪ್ರತಿನಿಧಿ ಕೆಲಸ ಮಾಡುವಂತೆ ಮಾಡಬೇಕು. “ಅಯ್ಯೋ ಚೆನ್ನಾಗ್ ಹೇಳಿದ್ರಿ ಸರ್… ಇವೆಲ್ಲ ನಮ್ಮ ದೇಶದಲ್ಲಿ ಕೆಲಸ ಮಾಡುತ್ವೆ?” ಅಂತ ನೀವು ಹೇಳಬಹುದು. ಆದರೆ ನಮ್ಮ ದೇಶದಲ್ಲಿ ರಾಜಕಾರಣಿಗಳು ಉಂಡಾಡಿ ಗುಂಡರಾಗಿರುವುದು, ಭ್ರಷ್ಟರಾಗಿರುವುದು, ಮೈಗಳ್ಳರಾಗಿರುವುದರಲ್ಲಿ ಪ್ರಜೆಗಳ ನಿರ್ಲಕ್ಷ, ಮೇಲೆ ಹೇಳಿದ ಭಾಗವಹಿಸುವಿಕೆಯ ಕೊರತೆ ಹಾಗೂ ಅಸಡ್ಡೆಯೂ ಕಾರಣ ಎಂಬುದನ್ನು ನೀವು ಅಲ್ಲಗೆಳೆಯಲಾಗದು. “ಅಯ್ಯೋ ಈ ರಾಜಕಾರಣಿಗಳೆಲ್ಲ ಮಹಾ ಭ್ರಷ್ಟರು… ಹಾಗೆ ಹೀಗೆ” ಅಂತೆಲ್ಲ ಮನೆಯಲ್ಲಿ ಕುಳಿತು ಹರಟೆ ಹೊಡೆಯುವುದು ಸರಳ. ಆದರೆ ಅವರೂ ನಮ್ಮ ನಿಮ್ಮಂತ ಸಾಮಾನ್ಯರಾಗಿದ್ದವರೇ ಅಲ್ಲಿಗೆ ಹೋದವರು ಎಂಬುದನ್ನು ಮರೆಯಬಾರದು. “ವ್ಯವಸ್ಥೆ ಸರಿಯಿಲ್ಲ” ಎಂದು ಎಲ್ಲರೂ ಆಲಸ್ಯದಿಂದ ಕುಳಿತುಬಿಟ್ಟರೆ ವ್ಯವಸ್ಥೆ ಎಂದೆಂದೂ ಸರಿಯಾಗುವುದಿಲ್ಲ. ಬಹುಶಃ 100% ಪರ್ಫೆಕ್ಟ್ ವ್ಯವಸ್ಥೆ ಎಂದಿಗೂ ಬರುವುದಿಲ್ಲ…ಅವೆಲ್ಲ ಬಾಲಿಶ ಕನಸುಗಳಷ್ಟೆ. ಆದರೆ ಈಗಿರುವುದಕ್ಕಿಂತ ನೂರು ಪಟ್ಟು ಒಳ್ಳೆಯ ವ್ಯವಸ್ಥೆಯನ್ನು ನಾವು ನಿರ್ಮಿಸಬಹುದಲ್ಲ? ನಮ್ಮ ಗುರಿ ಅದಾಗಿರಬೇಕು.

ಚುನಾವಣೆ ಮುಗಿದಿದೆ. ಮತದಾರ ಗುಪ್ತವಾಗಿ ತನ್ನ ತೀರ್ಮಾನವನ್ನು ಮಾಡಿದ್ದಾನೆ. ಮುಂದಿನ ಐದು ವರ್ಷ ಪ್ರಜಾಪ್ರಭುತ್ವ ಆಡಳಿತದಲ್ಲಿರುವಂತೆ ನಾವು ನೋಡಿಕೊಳ್ಳೋಣ. ಆ ಸರ್ಕಾರ, ಈ ಸರ್ಕಾರ, ಯಾವುದೋ ಒಂದು ಸರ್ಕಾರ ಬರುತ್ತೆ. ಬರಲಿ. ಆದರೆ, ಮುಂದಿನ ಐದು ವರ್ಷಗಳ ಕಾಲ ‘ಪ್ರಜಾಪ್ರಭುತ್ವ’ ಆಡಳಿತದಲ್ಲಿರುವಂತೆ ನೋಡಿಕೊಳ್ಳುವುದು ಸಾಮಾನ್ಯರಾದ ನಮ್ಮ ಜವಾಬ್ದಾರಿ.


Wednesday, January 25, 2023

'ದಿ ಮೋದಿ ಕ್ವೆಶ್ಚನ್': ಬಿಬಿಸಿಯ ಹಳೇ ರಾಗ, ಹೊಸ ಹಾಡು!


ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಭಾರತವನ್ನು ಕಂಡರೆ ಅದೇನೋ ಮತ್ಸರ. ಭಾರತವನ್ನು ನೆಗೆಟಿವ್ ಲೈಟ್ ನಲ್ಲಿ ತೋರಿಸಲು ಅವು ತುದಿಗಾಲಲ್ಲಿ ನಿಂತಿರುತ್ತವೆ. ಬಹುಶಃ ಮೊದಲೆಲ್ಲ ಅಲ್ಲಿಯ ಜನ ಅವರು ತೋರಿಸಿದ್ದನ್ನೆಲ್ಲ ನಂಬುತ್ತಿದ್ದರೇನೋ. ಈಗ ಬಹಳಷ್ಟು ಜನ ನಂಬಲಾರರು ಅಂತ ನನ್ನ ಊಹೆ. ಏಕೆಂದರೆ ಈಗ ಸಾಕಷ್ಟು international travel ಆಗುವುದರಿಂದ, ಇಲ್ಲಿಯ ಸ್ಥಿತಿಗತಿಗಳನ್ನು ಸ್ವತಃ ನೋಡಿರುವ ಅನೇಕ ಜನ ಅಲ್ಲಿರುತ್ತಾರೆ ಹಾಗೂ ಸೋಷಿಯಲ್ ಮೀಡಿಯ ಈಗಿನ ಕಾಲದಲ್ಲಿ ಕೆಲವು ಸುಳ್ಳುಗಳು ತುಂಬಾ ದಿನ ಉಳಿಯದಂತೆ ನೋಡಿಕೊಳ್ಳುತ್ತಿವೆ. ಹಾಗೂ 2014ರ ಈಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಹೆಚ್ಚಿರುವ ಭಾರತದ ವರ್ಚಸ್ಸು, ಪಾಶ್ಚಾತ್ಯ ಮಾಧ್ಯಮಗಳು ಕಾಪಿಟ್ಟುಕೊಂಡು ಬಂದಿರು ನೆಗೆಟಿವ್ ಪ್ರೊಪೊಗಂಡಾಗೆ ಹಾನಿಯುಂಟುಮಾಡಿದೆ. ಸದ್ಗುರು ಮುಂತಾದ ಭಾರತೀಯ ಸಂತರೂ ಕೂಡ ಸೋಷಿಯಲ್ ಮಿಡಿಯಾ ಮೂಲಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ, ಅದರ ಸಂಸ್ಕೃತಿ ಹಾಗೂ ನೈಪುಣ್ಯವನ್ನು ಸಾರುತ್ತಿರುವುದರಿಂದ, ಬಹಳ ದೊಡ್ದ ಸಂಖ್ಯೆಯಲ್ಲಿ ಪಾಶ್ಚಿಮಾತ್ಯ ಯುವಜನಾಂಗ ಭಾರತೀಯ ಜ್ಞಾನಸುಧೆಗೆ ಮಾರುಹೋಗುತ್ತಿದೆ. ಆದರೂ ಈ ಮಾಧ್ಯಮಗಳು ಛಲಬಿಡದೆ ತಮ್ಮ ಪ್ರೊಪೊಗಂಡಾವನ್ನು ಮುಂದುವರಿಸುವುದು ನನಗೆ ಅಚ್ಚರಿ ತರುತ್ತದೆ.

ಈ ಪ್ರಯತ್ನದ ಮುಂದುವರಿದ ಭಾಗವಾಗಿ ಬಿಬಿಸಿ ‘The Modi Question’ ಎಂಬ ಡಾಕ್ಯುಮೆಂಟರಿಯೊಂದಿಗೆ ಹಳೇ ರಾಗವನ್ನು ಹೊಸದಾಗಿ ಹಾಡಲು ಬಂದಿದೆ. 20 ವರ್ಷ ಹಳೆಯ ವಿವಾದವನ್ನು ಹೊಸ ವಿಷಯದಂತೆ, ಏನೋ ಸಾಧಿಸಿದವರಂತೆ ಹೊಸದಾಗಿ ಕಥೆ ಹೇಳಲು ಬಿಬಿಸಿ ಶುರುವಿಟ್ಟುಕೊಂಡಿದೆ.

ಆ ಡಾಕ್ಯುಮೆಂಟರಿ ನೋಡುವ ‘ಭಾಗ್ಯ’ ನನಗೆ ಒದಗಿಬಂದಿಲ್ಲ, ಏಕೆಂದರೆ ಸರ್ಕಾರ ಅದನ್ನು ಬ್ಯಾನ್ ಮಾಡಿದೆ. ಈ ಪಾಶ್ಚಿಮಾತ್ಯ ಮಾಧ್ಯಮಗಳ ಹಿನ್ನಲೆ ಹಾಗೂ ಮನಸ್ಥಿತಿ ನನಗೆ ಗೊತ್ತಿರುವುದರಿಂದ, ಈ ಹೊಸ ಡಾಕ್ಯುಮೆಂಟರಿಯಲ್ಲಿ ಏನೋ ಹೊಸದಿರುತ್ತೆ ಅದನ್ನು ನೋಡಬೇಕು ಎಂಬ ಕುತೂಹಲ ನನಗೂ ಇಲ್ಲ. In fact, ಅದನ್ನು ನೋಡಿ ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟವೂ ಇಲ್ಲ. ಆದರೆ ಪೂರ್ವಗ್ರಹ ಪೀಡಿತ ಡಾಕ್ಯುಮೆಂಟರಿಯೊಂದು ಅಷ್ಟೊಂದು ಸುದ್ದಿ ಮಾಡುತ್ತಿರುವಾಗ, ಆ ಪ್ರಯತ್ನವನ್ನು ಖಂಡಿಸದೇ, ಹೊಸಕಿಹಾಕದೆ ಹಾಗೇ ಇದ್ದರೆ, ಅದೇಕೋ ನಮಗೇ ನಾವು ಮೋಸಮಾಡಿಕೊಂಡಹಾಗೆ.

ಆ ಕಾರಣಕ್ಕಾಗಿ, Times Now ಕಲೆಹಾಕಿರುವ, ಡಾಕ್ಯುಮೆಂಟರಿಯಲ್ಲಿ ತೋರಿಸಿರುವ 5 ಮಿಥ್ಯೆಗಳನ್ನು ನಿಮ್ಮ ಮುಂದಿಡುತ್ತೇನೆ.

ಗೋಧ್ರಾ ರೈಲಿನಲ್ಲಿ ಪೆಟ್ರೋಲ್ ಸುರಿದು ನಡೆಸಿದ ಹತ್ಯಾಕಾಂಡ ಒಂದು ಸಂಚು ಅಥವಾ conspiracy ಅಲ್ಲ ಅನ್ನುವ ರೀತಿಯ ವಾದಗಳನ್ನು ಮಂಡಿಸಲಾಗಿದೆ.

ಸತ್ಯ: 2011ರಲ್ಲಿ ನ್ಯಾಯಾಲಯ ಅದೊಂದು pre-planned ಸಂಚಾಗಿತ್ತು ಎಂದು ತೀರ್ಪು ನೀಡಿ 31 ಜನರಿಗೆ ಶಿಕ್ಷೆ ವಿಧಿಸಿದೆ.

ಗೋಧ್ರಾ ಹಿಂಸಾಚಾರವನ್ನು ತನಿಖೆ ಮಾಡಲು ರೂಪಿಸಿದ್ದ ವಿಶೇಷ ತನಿಖಾ ತಂಡ - S.I.T ಕೇವಲ ಮೇಲಿಂದ ಮೇಲಷ್ಟೇ ನಾಮ್ಕಾವಸ್ಥೆ ತನಿಖೆ ನಡೆಸಿದೆ ಎಂದು ಡಾಕ್ಯುಮೆಂಟರಿ ಹೇಳಿದೆ.

ಸತ್ಯ: S.I.T ಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಸ್ವತಃ ನೇಮಿಸಿತ್ತು ಹಾಗೂ ತಂಡ ನಡೆಸಿದ ತನಿಖೆಯ ಆಳವನ್ನು ಸ್ವತಃ ಸುಪ್ರೀಂ ಕೋರ್ಟ್ ಶ್ಲಾಘಿಸಿತ್ತು.

ಮೇಲಿನ ಎರಡೂ ಸಂಗತಿಗಳು ಬಿಬಿಸಿಗೆ ಭಾರತೀಯ ಕೋರ್ಟ್ ಗಳ ಮೇಲೆ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಇಂತಹ ಡಾಕ್ಯುಮೆಂಟರಿ ಹಾಗೂ ಸಂಸ್ಥೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ಸಿಗರು ಎಂಥವರು ಎಂಬುದನ್ನು ನಾವು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು.

ಎಹ್ಸಾನ್ ಜಫ್ರಿ (ಕಾಂಗ್ರೆಸ್ ಮಾಜಿ ಸಂಸದ) ಹತ್ಯೆಯಾಗುವ ಮುನ್ನ ಮೋದಿಗೆ ಕರೆ ಮಾಡಿರುವ ಕುರಿತು ಡಾಕ್ಯುಮೆಂಟರಿ ಹೇಳುತ್ತದೆ.

ಎಹ್ಸಾನ್ ಜಫ್ರಿ ಅಂದು ಗುಜರಾತಿನ ಮುಖ್ಯಮಂತ್ರಿಗೆ ಕರೆಮಾಡಿದ್ದ ಕಾಲ್ ರೆಕಾರ್ಡ್ಸ್ ಇಲ್ಲ ಎಂದು ಎಸ್ಐಟಿ ತನ್ನ ತನಿಖಾವರದಿಯಲ್ಲಿ ಉಲ್ಲೇಖಿಸಿದೆ. ಎಸ್ಐಟಿ ಗೇ ಸಿಗದ ದಾಖಲೆ, ಬಿಬಿಸಿ ಸಿಕ್ಕಿದ್ದು ಎಲ್ಲಿಂದ ಎಂಬುದು ಮಾತ್ರ ನಮ್ಮ ಲಿಬರಲ್ ಗಳೇ ಉತ್ತರಿಸಬೇಕಾದ ಪ್ರಶ್ನೆ.

ತೀಸ್ತಾ ಸೆತಲ್ವಾಡ್ ‘ಮಾನವ ಹಕ್ಕುಗಳಿಗಾಗಿ’ ಹೋರಾಟ ಮಾಡುತ್ತಿರುವವರು ಎಂದು ತೋರಿಸಲಾಗಿದೆ.

ಸತ್ಯ: ಈಕೆ ‘ಮಾನವ ಹಕ್ಕು’ಗಳಿಗೆ ಹೋರಾಟ ಮಾಡುವುದು ಅಷ್ಟರಲ್ಲಿರಲಿ, ಈಕೆ ಮೋದಿಗೆ ಗಲ್ಲುಶಿಕ್ಷೆ ಆಗಬೇಕೆಂದು ಸಂಚು ರೂಪಿಸಿದ್ದರು ಎಂದು ಎಸ್ಐಟಿ ತನ್ನ ತನಿಖಾವರದಿಯಲ್ಲಿ ಹೇಳಿದೆ. 

ತೀಸ್ತಾ ಸೆತಲ್ವಾಡ್ ಸೆಲೆಕ್ಟಿವ್ ಹೋರಾಟಗಳಿಗೆ, so called ಎಡಪಂಥೀಯ ಧೋರಣೆಗಳಿಗೆ (ಕು)ಖ್ಯಾತವಾದ ಹೆಸರು. ಅಂಥವರನ್ನೇ ಹುಡುಕಿ ಹೆಕ್ಕಿ ಇಂಟರ್ವ್ಯೂ ಮಾಡಿ ತಾನೇನೋ ಊರಿಗಿಲ್ಲದ ಡಾಕ್ಯುಮೆಂಟರಿ ಮಾಡಿದ್ದೇನೆಂದು ಬಿಬಿಸಿ ಬೀಗುತ್ತಿರುವುದು ಹಾಸ್ಯಾಸ್ಪದವಷ್ಟೇ.

ಮೋದಿ ವಿರುದ್ಧ ಅನೇಕ ಬಾರಿ ಮಾತಾಡಿದ ಖ್ಯಾತಿ ಹೊಂದಿರುವ ಸಂಜೀವ್ ಭಟ್ ಎಂಬ ಮಾಜಿ ವಿವಾದಿತ ಐಪಿಎಸ್ ಅಧಿಕಾರಿ, ತಾನು ಗೋಧ್ರಾ ರೈಲು ಹತ್ಯಾಕಾಂಡದ ನಂತರ ಮುಖ್ಯಮಂತ್ರಿಗಳ ಗೃಹದಲ್ಲಿ ನಡೆದ ಸಭೆಯಲ್ಲಿ ಇದ್ದೆನೆಂದೂ, ಅಲ್ಲಿ ಮೋದಿ “ಹಿಂದೂಗಳಿಗೆ ಅವರ ಆಕ್ರೋಶವನ್ನು ಹೊರಹಾಕಲು ಬಿಡಿ” ಎಂದು ಹೇಳಿದರೆಂದೂ ಹೇಳುತ್ತಾನೆ.

ಸತ್ಯ: ಈತ ಅಲ್ಲಿ ಇದ್ದುದ್ದಕ್ಕೆ ಯಾವ ದಾಖಲೆಯೂ ಇಲ್ಲವೆಂದೂ, ಈತ ಸುಳ್ಳುಹೇಳುತ್ತಿದ್ದಾನೆಂದು ಎಸ್ಐಟಿ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಈತ ದಾಖಲೆಯೊಂದನ್ನು ಈ ಕಾರಣಕಾಗಿ ಫೋರ್ಜ್(ನಕಲಿ) ಮಾಡಿದ ಸಂಗತಿಯನ್ನೂ ಉಲ್ಲೇಖಿಸಲಾಗಿದೆ.

ಬೆಳಿಗ್ಗೆ ಮೋದಿ ತುಂಬಾ ಹಿಂದೆ ಬಿಬಿಸಿಗೆ ಕೊಟ್ಟ ಸಂದರ್ಶನದ ತುಣುಕೊಂದನ್ನು ನೋಡುತ್ತಿದ್ದೆ. ಅದರಲ್ಲಿ ಪ್ರಶ್ನೆ ಕೇಳುವಾಕೆ ಧಿಮಾಕಿನಿಂದ ಮಾತನಾಡುತ್ತಾ ಕೊನೆಗೊಮ್ಮೆ ‘ಮಾನವ ಹಕ್ಕು’ಗಳ ಕುರಿತು ಏನೋ ತೆಗೆದಾಗ, ಮೋದಿ ತಕ್ಷಣ ‘You Britishers don’t tell us about the human rights. We know human rights” ಎಂದಿದ್ದರು. ಶತಮಾನಗಳ ಕಾಲ ಅರ್ಧ ಪ್ರಪಂಚದ ಜೀವಹಿಂಡಿದ ಬ್ರಿಟಿಷರು, ಜಲಿಯನ್ ವಾಲಾಭಾಗ್ ನಂತಹ ಕೃತ್ಯಗೈದಿದ್ದ ಬ್ರಿಟೀಷರು ಉಳಿದವರಿಗೆ ಮಾನವಹಕ್ಕುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ನೋಡಿಕೊಳ್ಳಬೇಕು. 1943ರಲ್ಲಿ ಬಂಗಾಳವನ್ನು ಕಾಡಿದ ಮಹಾಕ್ಷಾಮ ಸುಮಾರು 37 ಲಕ್ಷ ಜನರನ್ನು ಬಲಿಪಡೆಯಿತು. ಈ ಕ್ಷಾಮ ಮಳೆಯ ಅಭಾವದಿಂದ ಆದದ್ದಲ್ಲ! ಬಂಗಾಳ ಬರಬೇಕಿದ್ದ ಆಹಾರ ಪದಾರ್ಥಗಳನ್ನು ಎರಡನೇ ವಿಶ್ವಯುದ್ಧದಲ್ಲಿದ್ದ ಬ್ರಿಟಿಷ್ ಪಡೆಗಳಿಗೆ ಕಳಿಸಲಾಗುತ್ತಿತ್ತು. ಇದು ಅಂದಿನ ಬ್ರಿಟನ್ ಪ್ರಧಾನಿ ಚರ್ಚಿಲ್ ನ ನಿರ್ಧಾರ. ಲಕ್ಷಾಂತರ ಜನರು ಬಂಗಾಳದಲ್ಲಿ ಆಹಾರವಿಲ್ಲದೇ ಸಾಯುತ್ತಿದ್ದಾಗ ಚರ್ಚಿಲ್ ಹೇಳಿದ್ದೇನು ಗೊತ್ತಾ? “Anyway, they will breed like rabbits” ಎಂದರೆ “ಹೇಗಿದ್ದರೂ ಭಾರತೀಯರು ಇಲಿಗಳಂತೆ ಮಕ್ಕಳಿಗೆ ಜನ್ಮನೀಡುತ್ತಾರೆ” ಎಂದು ಹೇಳಿದ್ದ ರಾಕ್ಷಸ ವಿನ್ಸ್ಟನ್ ಚರ್ಚಿಲ್! ಅವನನ್ನು ಇಂದಿಗೂ ಹೀರೋನಂತೆ ಬಿಂಬಿಸುವ ಬ್ರಿಟೀಷರು ನಮಗೆ ಮಾನವ ಹಕ್ಕುಗಳನ್ನು ಹೇಳಿಕೊಡುವರೇ?

ಯಾರು ಏನೇ ಹೇಳಿದರೂ ಭಾರತಕ್ಕೆ ಇಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಂದು ಬೆಲೆಯಿದೆ. ಮೋದಿ ನಿಂತಿದ್ದರೆ, ಬೈಡೆನ್ ಕೂಡ ಅವರೇ ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ. ಭಾರತ ತಾನೇ ವ್ಯಾಕ್ಸಿನ್ ತಯಾರಿಸಿದ್ದು(ಒಂದಲ್ಲ ಎರಡು!), ಅನೇಕ ದೇಶಗಳಿಗೆ ಹಂಚಿದ್ದು, ಇಸ್ರೋದ ಸಾಧನೆಗಳು, ಕೇಂದ್ರ ಸರ್ಕಾರದ ದಿಟ್ಟ ನಿಲುವುಗಳು - ಹೀಗೆ, ಅನೇಕ ವಿಚಾರಗಳು ಇಂದು ಭಾರತದ ಸ್ಥಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆಯದೇ ಸ್ಥಾನಕ್ಕೆ ಕರೆದೊಯ್ದಿದೆ. ಬದಲಾದ ವಿದೇಶ ನೀತಿ ಕೂಡ ಇದಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದ್ದರಿಂದ ನಮ್ಮೊಳಗೇ ಇರುವವರು ನಮ್ಮ ಕಾಲೆಳೆಯದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ನಮ್ಮ ಸರ್ಕಾರಗಳ ತಪ್ಪುಗಳನ್ನು, ಅಸಡ್ದೆಗಳನ್ನು ನಾವು ಗಟ್ಟಿಕಂಠದಿಂದ ವಿರೋಧಿಸೋಣ. ಆದರೆ ಹೊರಗಿನವರು ಇಲ್ಲಿ ಬಂದು ಕಡ್ಡಿ ಅಲ್ಲಾಡಿಸುವುದು ಬೇಡ. ಸದ್ಯಕ್ಕೆ, ನಮ್ಮ ದೇಶದ ಉಸಾಬರಿಯನ್ನು ಹೇಗೆ ನೋಡಿಕೊಳ್ಳುವುದು ಎಂದು ನಮಗೆ ಗೊತ್ತು. 


Thursday, December 29, 2022

‘ಮೆಲುಹಾ’ದ ಅಮರರು : ಅಮಿಶ್ ರ ಜಗತ್ಪ್ರಸಿದ್ಧ ಕಥೆಯ ಕುರಿತು

 ಅಮಿಶ್ ರ Shiva Triology ಸರಣಿ ಪುಸ್ತಕಗಳ ಕುರಿತು ನೀವು ಕೇಳಿರಬಹುದು. ಇಂಗ್ಲೀಷ್ ಕಾದಂಬರಿಗಳ ಓದುಗರಾಗಿದ್ದರೆ, ಖಂಡಿತ ಓದಿರುತ್ತೀರಿ ಕೂಡ. ಏಕೆಂದರೆ, ಇದು ಭಾರತದ ಪುಸ್ತಕ ಪ್ರಪಂಚದ ಎಲ್ಲ ದಾಖಲೆಗಳನ್ನು ಮುರಿದ ಸರಣಿ. ಎಲ್ಲೋ ಬ್ಯಾಂಕ್ ಒಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಅಮಿಶ್ ರನ್ನು ಪೂರ್ಣಕಾಲಿಕ ಬರಹಗಾರರಾಗುವಂತೆ ಮಾಡಿ, ಅವರಿಗೆ ಇನ್ನಿಲ್ಲದ ಖ್ಯಾತಿಯನ್ನು ತಂದುಕೊಟ್ಟ ಕೃತಿ. ಉದಾಹರಣೆಗೆ, ಈ ಸರಣಿಯ ಮೊದಲ ಭಾಗ: The Immortals of Meluhaದ 60 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ! ನಾನು ಈಗ ಬರೆಯ ಹೊರಟಿರುವುದು ಇದೇ ಕೃತಿಯ ಬಗ್ಗೆ.


ಒಬ್ಬ ಸಾಮಾನ್ಯ ಶಿವನಾಗುವ ಕಥೆಯಿದು. ಶಿವ, ಮಹಾದೇವನಾಗುವ ಕಥೆಯಿದು. ಹಿಮಾಲಯ ಪ್ರಾಂತ್ಯದ ಬುಡಕಟ್ಟುವಿನಲ್ಲಿ ಜನಿಸಿದ ಗಟ್ಟಿಮುಟ್ಟಾದ ಯುವಕನೊಬ್ಬ, ಹಿಮಾಲಯದಾಚೆಯ ಮೆಲುಹಾ ಸಾಮ್ರಾಜ್ಯದ ನಾಯಕನಾಕುವ, ‘ನೀಲಕಂಠ’ನಾಗುವ, ಮಹಾದೇವನಾಗುವ ಕಥೆಯಿದು. ಒಬ್ಬ ಸಾಮಾನ್ಯ ಯಾವ ಯಾವ ಮಾನಸಿಕ, ದೈಹಿಕ ತುಮುಲಗಳಿಗೆ ಒಳಗಾಗುತ್ತಾನೋ, ಈ ಕಥೆಯಲ್ಲಿ ಶಿವನೂ ಅವೆಲ್ಲವನ್ನೂ ಅನುಭವಿಸುತ್ತಾನೆ.


ಈ ಕಥೆಯ ಇನ್ನೊಂದು ವಿಶೇಷವೆಂದರೆ, ಇತಿಹಾಸದಲ್ಲಿದ್ದ ಏಕೈಕ ಶಿವನನ್ನಾಗಿ ಈ ಕಥೆಯ ನಾಯಕನನ್ನು ಲೇಖಕ ಬಿಂಬಿಸುವುದಿಲ್ಲ. ಹಿಂದೆ ಕೂಡ ಮಹಾದೇವರಿದ್ದರು, ರುದ್ರನಿದ್ದನು, ಈಗ ಪ್ರಪಂಚದಲ್ಲಿ ‘ದುಷ್ಟತನ’ ಮತ್ತೆ ಹೆಚ್ಚಾಗಿರುವುದರಿಂದ ಮತ್ತೊಬ್ಬ ಮಹಾದೇವ ಉದಯಿಸಿದ್ದಾನೆ ಎಂಬುದು ಇಲ್ಲಿಯ ದೃಷ್ಟಿಕೋನ.


ಬಹುಶಃ ಲೇಖಕರು ನಮ್ಮ ನಾಗರೀಕತೆಗಳ ಬಗ್ಗೆ, ಉದಾಹರಣೆಗೆ ಸಿಂಧು ನಾಗರೀಕತೆ, ವೈದಿಕ ನಾಗರೀಕತೆ, ವಿವಿಧ ರಾಜರುಗಳ ಆಡಳಿತದಲ್ಲಿದ್ದ ನಾಗರೀಕತೆಗಳನ್ನು ಚೆನ್ನಾಗಿ ಅಭ್ಯಸಿಸಿ, ಈ ಕಥೆಯಲ್ಲಿ ‘ಮೆಲುಹ’ನ್ನರ ನಾಗರೀಕತೆಯನ್ನು ಚಿತ್ರಿಸಿದ್ದಾರೆ. ಮೆಲುಹನ್ನರು ಸೂರ್ಯವಂಶದವರು. ಅವರ ಅತ್ಯುಚ್ಛ ದೇವ ರಾಮ. ಅದೇ ಸಮಯದಲ್ಲಿ ಇವರ ನೆರೆಹೊರಯವರಾಗಿ ಇದ್ದವರು ಚಂದ್ರವಂಶಿಗಳು - ಸ್ವದ್ವೀಪ ಎಂಬ ರಾಜ್ಯದಲ್ಲಿ ಅವರ ವಾಸ. ಇವರಿಬ್ಬರ ನಡುವೆ ಅದಮ್ಯ ವೈಷಮ್ಯ. ಇಬ್ಬರೂ ನೀಲಿಯಾದ ಕಂಠ ಉಳ್ಳ ಮಹಾದೇವ ಉದಯಿಸಿ, ತಮ್ಮನ್ನು ಸೇರಿಕೊಂಡು ತಮ್ಮ ವೈರಿಯನ್ನು ನಾಶಮಾಡುತ್ತಾನೆ ಎಂದು ನಂಬುವವರು. ಕೊನೆಗೆ ‘ನೀಲಕಂಠ’ ಯಾರ ಪಂಗಡ ಸೆರುತ್ತಾನೆ, ಯಾರನ್ನು ಸಂಹರಿಸುತ್ತಾನೆ, ಸಂಹರಿಸಿದ ನಂತರ ಏನು ಮಾಡುತ್ತಾನೆ ಎಂದು ತಿಳಿಯಲು ನೀವು ಪುಸ್ತಕವನ್ನೇ ಓದಬೇಕು.


‘ಶಿವ’ ಎಂದರೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ನಾಗರೀಕತೆಯಿಲ್ಲದೇ wild ಆಗಿ ಬದುಕಿದವನು ಎಂದೇ ಬಿಂಬಿತವಾದವ. ಎಂದರೆ, ಶಿವ ಸ್ಮಶಾನದ ವಿಭೂತಿಯನ್ನು ಬಳಿದುಕೊಳ್ಳುತ್ತಿದ್ದ, ಸ್ನಾನ ಬಹಳ ಅಪರೂಪಕ್ಕೆ ಮಾಡುತ್ತಿದ್ದ, ಭಂಗಿ ಸೇದುತ್ತಿದ್ದ, ಹುಲಿಯ ಚರ್ಮವನ್ನು ಧರಿಸುತ್ತಿದ್ದ…. ಹೀಗೆ. ಇಲ್ಲಿಯೂ ಶಿವನ ಈ ಅಂಶಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಒಂದು ಸಮತೋಲನವನ್ನು ಕಂಡುಕೊಂಡಿರುವುದಕ್ಕೆ ಲೇಖಕರನ್ನು ಅಭಿನಂದಿಸಬೇಕು.


ಇಷ್ಟೆಲ್ಲ ಹೇಳಿಯೂ - ನಮ್ಮ ಕಥೆಗಳಲ್ಲಿ, ಇತಿಹಾಸದಲ್ಲಿ ಬರುವ ಶಿವನಿಗೆ ಹೋಲಿಸಿದರೆ, ಇಲ್ಲಿಯ ಶಿವ ಒಂದು ಬಹಳ dumbed down ವರ್ಷನ್ ಆಗಿ ಕಾಣಿಸುತ್ತಾನೆ. ನಮ್ಮ ಕಥೆಗಳಲ್ಲಿ ಬರುವ ಶಿವನಿಗಿಂತ ಈತ ಬಹಳ ಲೈಟ್ ವರ್ಷನ್ ಆಗಿ ಕಾಣಿಸುತ್ತಾನೆ. ಏಕೆಂದರೆ  ನಮ್ಮ ಕಥೆಗಳಲ್ಲಿ ಬರುವ ಶಿವ ಮತ್ತಷ್ಟು, ಇನ್ನಷ್ಟು wild ಸ್ವರೂಪಿ. ಆತನಿಗೆ ಸರಿ-ತಪ್ಪು ಲೆಕ್ಕಕ್ಕಿಲ್ಲ. ಆತನಿಗೆ ಯಾರೂ ಬುದ್ಧಿ ಹೇಳಬೇಕಾಗಿಲ್ಲ. ನಮ್ಮ ಶಿವ ಕೇವಲ ಭಂಗಿಯನ್ನೊಂದೇ ಸೇದುವುದಿಲ್ಲ - ಧ್ಯಾನಕ್ಕೆ ನಿಶ್ಚಲವಾಗಿ ಕುಳಿತನೆಂದರೆ ಮುಗಿಯಿತು - ಮೂರು ತಿಂಗಳಾಗಲೀ, ಮೂರು ವರ್ಷವಾಗಲೀ ಆತ ಕದಲುವುದಿಲ್ಲ.ಆತ ಯಾರಿಗೋ ಹೆದರುತ್ತ ಕೂರುವುದಿಲ್ಲ. ಒಟ್ಟಿನಲ್ಲಿ ಶಿವನಿಗೆ, ಶಿವನೇ ಸಾಟಿ.


ಆದರೆ ಇದು(ಈ ಪುಸ್ತಕ) ಒಂದು ಕಥೆಯಷ್ಟೆ. ಲೇಖಕನಿಗೆ ತನ್ನ ಕಲ್ಪನಾ ಲಹರಿಯನ್ನು ಹರಿದುಬಿಡುವ ಸ್ವಾತಂತ್ರ್ಯ ಇದೆ. ಸಾಮಾಜಿಕ ಹಾಗೂ ಕಾಲೇಜ್ ಲೈಫ್ ಕಾದಂಬರಿಗಳೇ, ಭಾರತೀಯ ಇಂಗ್ಲೀಷ್ ಕಾದಂಬರಿ ಸಾಹಿತ್ಯವನ್ನು ಆಳುತ್ತಿದ್ದ ಕಾಲದಲ್ಲಿ ಬಂದು, ಇಂಥಹ ಕಥಾವಸ್ತುವಿನೊಂದಿಗೆ ಸಾಹಿತ್ಯಲೋಕವನ್ನು ಬಡಿದೆಬ್ಬಿಸಿದ ಅಮಿಶ್ ರನ್ನು ಶ್ಲಾಘಿಸಲೇಬೆಕು. ನೀವಿನ್ನೂ ಓದಿಲ್ಲವಾದರೆ, ಒಮ್ಮೆ ಓದಿ :)



Friday, September 3, 2021

’ಸದ್ಗುರು’ - ಇಡೀ ವಿಶ್ವ ಭಾರತೀಯ ಸಂಸ್ಕೃತಿಯೆಡೆಗೆ ಬೆರಗುಗಣ್ಣಿನೊಂದಿಗೆ ನೋಡುವಂತೆ ಮಾಡುತ್ತಿರುವ ಚೈತನ್ಯ!

'ಸದ್ಗುರು'. ಇವತ್ತು ಆ ಒಂದು ಹೆಸರನ್ನು ಹೇಳಿದರೆ ಕಣ್ಣಲ್ಲಿ ನೀರು ತಂದುಕೊಂಡು ವಿನೀತರಾಗುವ ಲಕ್ಷಾಂತರ ಜನ ನಿಮಗೆ ಕಾಣಸಿಗುತ್ತಾರೆ. ಸದ್ಗುರುಗಳ ಮಾತುಗಳು, ಅವರ ಯೋಗ  ಕಾರ್ಯಕ್ರಮಗಳು, ಇನ್ನರ್ ಇಂಜಿನಿಯರಿಂಗ್ ಹೀಗೆ ಅವರ ಸಮರ್ಪಣೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಂಪೂರ್ಣ ಪರಿವರ್ತನೆಗೆ ಕಾರಣವಾಗಿದೆ. ಇಂದು ಸದ್ಗುರುಗಳಿಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸಮಾಡುತ್ತಿರುವ ಸಾವಿರಾರು ಜನರಿದ್ದಾರೆ. ತಮಗೆ ಸಮಯ ಸಿಕ್ಕಾಗ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಸ್ವಯಂಸೇವೆ ಮಾಡುವ ಲಕ್ಷಾಂತರ ಜನ ಸದ್ಗುರುಗಳ ಬೆನ್ನಹಿಂದಿದ್ದಾರೆ. 


ಈಗ ಸದ್ಗುರು ಎಂದು ಖ್ಯಾತರಾಗಿರುವ ಜಗದೀಶ್ ವಾಸುದೇವ್ ಹುಟ್ಟಿದ್ದು ಮೈಸೂರಿನ ಬಿ.ವಿ. ವಾಸುದೇವ್ ಹಾಗೂ ಸುಶೀಲಾ ದಂಪತಿಗಳಿಗೆ. ಅದು ಒಂದು ತೆಲುಗು ಮಾತನಾಡುವ ಕುಟುಂಬ. ಬಿ.ವಿ. ವಾಸುದೇವ್ ರೈಲ್ವೇ ಇಲಾಖೆಯಲ್ಲಿ ಹಾಗೂ ಮೈಸೂರಿನಲ್ಲಿ ಹೆಸರಾಂತ ಕಣ್ಣಿನ ತಜ್ಞರಾಗಿದ್ದರು. ಸದ್ಗುರುಗಳು ಹೇಳುವ ಪ್ರಕಾರ ಅವರ ತಾಯಿ ಕರುಣಾಮಯಿ. ತಮ್ಮ ಪತಿ ಹಾಗೂ ಮಕ್ಕಳು ಸ್ವಚ್ಛಂದವಾಗಿ ಜೀವಿಸಲು ಸಾಧ್ಯವಾದ ಎಲ್ಲವನ್ನೂ ಮಾಡುವ ಅಪೂರ್ವ ಗೃಹಿಣಿ. ತಂದೆ ಅತ್ಯಂತ ಶಿಸ್ತು ಮತ್ತು ನಿಯತ್ತಿನ ವ್ಯಕ್ತಿ. ಚಿಕ್ಕ ವಯಸ್ಸಿನಲ್ಲಿ ತಮ್ಮ ತಾಯಿ ಅನಾರೋಗ್ಯಕ್ಕೀಡಾದಾಗ ಸರಿಯಾದ ವೈದ್ಯಕೀಯ ಸೌಲಭ್ಯಗಳು ಸಿಗದೆ ಆಕೆಯನ್ನು ಕಳೆದುಕೊಂಡು, ತಾನು ಶತಾಯುಗತಾಯು ಡಾಕ್ಟರ್ ಆಗಲೇಬೇಕೆಂಬ ಛಲದಿಂದ ಡಾಕ್ಟರ್ ಆದವರು. ವೈದ್ಯರಾದ ಬಳಿಕ ಯಾವ ಹೊತ್ತಿನಲ್ಲಿ ಎಲ್ಲೇ ಕರೆಬಂದರೂ, ಕ್ಷಣವೂ ಯೊಚಿಸದೇ ಅಲ್ಲಿ ಧಾವಿಸುವಷ್ಟು ಕರ್ತವ್ಯನಿಷ್ಠೆ. ತಾಯಿ ಮಮತಾಮಯಿ. ಮಕ್ಕಳು ಹಾಗೂ ಪತಿಗೆ ಚೂರೂ ಕುಂದಾಗದಂತೆ ಸಕಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡುವವರು. ತಾಯಿಯ ಕಾಳಜಿ, ನಡವಳಿಕೆ ತಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಅಪಾರ ಪ್ರಭಾವ ಬೀರಿದೆ ಎಂದು ಸದ್ಗುರು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.

ಜಗ್ಗಿ ಅತ್ಯಂತ ತುಂಟ ಹುಡುಗ. ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೋಗುತ್ತಿದ್ದುದು ಕಾಡು-ಮೇಡು ಅಲೆಯಲು. ಒಮ್ಮೊಮ್ಮೆ ಮನೆಯಲ್ಲಿ ಪತ್ರ ಬರೆದಿಟ್ಟೇ, ಕಾಡಿನ ಚಾರಣಕ್ಕೆಂದು ವಾರಾನುಗಟ್ಟಲೇ ತೆರಳುತ್ತಿದ್ದುದೂ ಉಂಟು. ಶಾಲೆಯಲ್ಲಿ ಶಿಕ್ಷಕರಿಗೆ  ಅತಿ ಹೆಚ್ಚು ಸವಾಲುಗಳನ್ನು ತಂದಿಡುವ ಪೋರ. ತನ್ನ ಸೈಕಲ್ ನಲ್ಲೇ ದಿನವೂ ಹತ್ತಾರು ಮೈಲುಗಳನ್ನು ತುಳಿಯುವ ಮಹಾ ಉತ್ಸಾಹಿ.
ಕಾಲೇಜಿನಲ್ಲಂತೂ ಈ ಯುವಕನ ಆಟಾಟೋಪ ಹೇಳತೀರದು. ಈತ ಕ್ಲಾಸಿನಲ್ಲಿದ್ದರೆ ಉತ್ತರಿಸಲಾಗದ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ. ನಮಗೂ ತೊಂದರೆ. ಅವನಿಗಂತೂ ನಮ್ಮ ತರಗತಿಗಳಲ್ಲಿರಲು ಕಿಂಚಿತ್ತೂ ಇಷ್ಟವಿಲ್ಲ. ಹಾಗಿದ್ದರೆ ನಿನಗೆ ಅಟೆಂಡೆನ್ಸ್ ಕೊಡುತ್ತೇವೆ, ಏನು ಬೇಕಾದರೂ ಮಾಡಿಕೊಂಡಿರು, ಉಪದ್ರವ ಕೊಡಬೇಡ ಎಂಬ ನಿರ್ಧಾರಕ್ಕೆ ಶಿಕ್ಷಕರು ಬಂದರು. ಜಗ್ಗಿ ಗೆ ಬೇಕಾದದ್ದೂ ಬೇರೇನೂ ಅಲ್ಲವಲ್ಲ?! ಇವೆಲ್ಲದರ ನಡುವೆಯೂ ಫೈನಲ್ ಇಯರ್ ಡಿಗ್ರಿಯನ್ನು ಮೈಸೂರು ಯೂನಿವರ್ಸಿಟಿಯಲ್ಲಿ ರ‍್ಯಾಂಕ್ ನೊಂದಿಗೆ ಸಮಾಪಣೆಗೊಳಿಸಿದ್ದು, ಇವರಿಗಿದ್ದ ತೀಕ್ಷ್ಣ ಬುದ್ಧಿಗೆ ಹಿಡಿದ ಕನ್ನಡಿ.



ಕಾಲೇಜಿನ ಸಮಯದಲ್ಲಿ, ಹಾಗೂ ನಂತರ ಜಗ್ಗಿಗೆ ಬೈಕಿನಲ್ಲಿ ದೇಶವನ್ನೆಲ್ಲ ತಿರುಗುವ ಹೆಬ್ಬಯಕೆ. ಆ ಸಮಯದಲ್ಲಿ ಅವರು ಭಾರತವನ್ನು ಹಲವು ಬಾರಿ ಉತ್ತರದಿಂದ ದಕ್ಷಿಣಕ್ಕೆ, ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಬೈಕ್ನಲ್ಲೇ ಕ್ರಮಿಸಿದ್ದಾರೆ. ಒಮ್ಮೆ ನೇಪಾಳದ ಗಡಿಗೆ ಹೋಗಿ ಪಾಸ್ ಪೋರ್ಟ್ ಇಲ್ಲ ಎಂಬ ಕಾರಣಕ್ಕೆ ಹಿಂದಿರುಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಕಾಲೇಜ್ ನಂತರ, ಜಗ್ಗಿಗೆ construction ಬಿಸಿನೆಸ್ ಅಭೂತಪೂರ್ವವಾಗಿಯೇ ಕೈಹಿಡಿದಿತ್ತು. ಸಾಕಷ್ಟು ಹಣ ಸಂಪಾದನೆಯಾಗುತ್ತಿತ್ತು. ಹೀಗೆ ಎಲ್ಲವೂ ಸರಿಯಿತ್ತು ಎನ್ನುವಾಗ ‘ಆ’ ಘಟನೆ ನಡೆಯಿತು.

ಜಗ್ಗಿ ವಾಸುದೇವ್ ಗೆ ಆಗ 25ರ ವಯಸ್ಸು. ಅವರು ಯೋಗಾಭ್ಯಾಸಗಳನ್ನು ಮಾಡಲು ಶುರುಮಾಡಿ ಆಗಲೇ ಹನ್ನೆರಡು ವರ್ಷವಾಗಿತ್ತು. ಅಂದೂ ಅವರು ಎಂದಿನಂತೆ ಮೈಸೂರಿನ ತಮ್ಮ ಕಚೇರಿಯಲ್ಲಿ ಒಂದಿಷ್ಟು ಕೆಲಸ ಮುಗಿಸಿದ್ದರು. ಮಧ್ಯಾಹ್ನದ ಹೊತ್ತಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರುವ ಮನಸ್ಸಾಯಿತು. ಚಾಮುಂಡಿ ಬೆಟ್ಟ ಅವರು ಅಪರೂಪಕ್ಕೆ ಹೋಗುವ ತಾಣ ಅಲ್ಲ. ಅವರು, ಅವರ ಗೆಳೆಯರು ಮನೆಯ ಹಿತ್ತಲಿಗೆ ಹೋಗುವಷ್ಟು ಬಾರಿ ಚಾಮುಂಡಿ ಬೆಟ್ಟಕ್ಕೂ ಹೋಗುತ್ತಿದ್ದರು. ಅವರಿಗೆ ಅದು ಅಂಗೈನ ಗೆರೆಗಳಷ್ಟು ಚಿರಪರಚಿತವಾದ ತಾಣ. ಅಂದೂ ಹಾಗೆಯೇ ಅಲ್ಲಿಗೆ ಹೋದರು. ಬೆಟ್ಟದ ಬಂಡೆಯೊಂದರ ಮೇಲೆ ಕುಳಿತರು. ಕುಳಿತಿದ್ದಷ್ಟೇ, ಒಂದು ಅಭೂತಪೂರ್ವ ಅನುಭಾವ ಅವರದ್ದಾಯಿತು. ಸುತ್ತಲಿನ ಮರ, ಗಿಡ, ಬಂಡೆ, ಬೆಟ್ಟ, ಗಾಳಿ, ನೀರು ಸರ್ವಸ್ವವೂ ತಮ್ಮದೇ ಭಾಗ ಎಂಬ ಜೀವಂತ ಅನುಭವ. ಕಣ್ಣಿನಲ್ಲಿ ಧಾರಾಕಾರ ನೀರು. ಅವರು ಈ ಭಾವದಿಂದ ಹೊರಬಂದಾಗ ಸುಮಾರು 5-6 ಘಂಟೆಗಳು ಕಳೆದಿದ್ದವು! ಆದರೆ ಅವರಿಗೆ ಕೇವಲ ಐದು ನಿಮಿಷವಷ್ಟೇ ಕುಳಿತ ಅನುಭವ. ಈ ಅನುಭವ ಮುಂದಿನ ದಿನಗಳಲ್ಲಿ ಹಲವು ಬಾರಿ ಮರುಕಳಿಸಿತು.



ತಮಗೆ ಆದ ಈ ಅಭೂತಪೂರ್ವ ಅನುಭವವನ್ನು, ತಾವು ಅನುಭವಿಸಿದ ಈ ಎಲ್ಲೆ ಮೀರಿದ ಮಹದಾನಂದವನ್ನು ಜಗತ್ತಿಗೆಲ್ಲ ಹಂಚಬೇಕು ಎಂಬ ಹಿರಿದಾಸೆ ಇವರದಾಯಿತು. ಈ ಶಪಥ ತೊಟ್ಟು, ತಮ್ಮ ಇಡೀ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟರು.

ಆರಂಭದ ದಿನಗಳು ಸುಲಭವಿರಲಿಲ್ಲ. ತಾವೇ ಎಲ್ಲಾಕಡೆ ಬೈಕ್ ನಲ್ಲಿ ಕ್ರಮಿಸಿ, ತಾವೇ ಸ್ಥಳಗಳನ್ನು ಹುಡುಕಿ, ಜನರ ಮನವೊಲಿಸಿ, ಅವರಿಗೆ ಯೋಗ ಕಾರ್ಯಕ್ರಮಗಳನ್ನು ಮಾಡುವಷ್ಟರಲ್ಲಿ ಹರಸಾಹಸವೇ ಆಗುತ್ತಿತ್ತು. ಬಹುಶಃ ಇವರು ಆ ದಿನಗಳಲ್ಲಿ ಲಕ್ಷ್ಮಣನಂತೆ ನಿದ್ರಿಸಿದ್ದೇ ಇಲ್ಲ. ಒಂದು ದಿನ ಮೈಸೂರಾದರೆ, ಮತ್ತೊಂದು ದಿನ ಮಂಗಳೂರು ಅಥವಾ ಶಿವಮೊಗ್ಗ. ಮುಂದಿನವಾರ ಹೈದರಾಬಾದ್! ಹೀಗೆ. 

ನಿಧಾನವಾಗಿ ಶಿಷ್ಯರನ್ನು, ಸ್ವಯಂಸೇವಕರನ್ನು ಸಂಪಾದಿಸುತ್ತಾ, 1992ರಲ್ಲಿ ಇವರು ಸ್ಥಾಪಿಸಿದ್ದು ‘ಈಶಾ ಫೌಂಡೇಶನ್’. ಸದ್ಗುರು ಪ್ರಾಣಪ್ರತಿಷ್ಠೆಯ ವಿಜ್ಞಾನದಲ್ಲಿ ನಿಸ್ಸೀಮರು. 1999ರಲ್ಲಿ ‘ಧ್ಯಾನಲಿಂಗ’ ಎಂಬ ಅದ್ಭುತ ಲಿಂಗವನ್ನು ಪ್ರಾಣಪತಿಷ್ಠೆಗೊಳಿಸಿದರು. ಈ ಲಿಂಗದ ವೈಶಿಷ್ಟ್ಯವೆಂದರೆ, ಇದರಲ್ಲಿ ಎಲ್ಲಾ ಏಳೂ ಚಕ್ರಗಳೂ ಅತ್ಯುನ್ನತ ಶಿಖರದಲ್ಲಿವೆ. ಇಂಥಹ ಲಿಂಗ ಮತ್ತೊಂದು ಸಿಗಲಾರದು. ಇದರ ಮಂಟಪದಲ್ಲಿ ಕುಳಿತರೆ, ಇನ್ಯಾವ ಸಹಾಯವೂ ಇಲ್ಲದೇ ನೀವು ಧ್ಯಾನಸ್ಥರಾಗಬಲ್ಲಿರಿ. ಕೊಯಮತ್ತೂರಿಗೆ ಹೋದಾಗ, ನೀವು ಇಲ್ಲೊಮ್ಮೆ ಭೇಟಿ ನೀಡಬೇಕು.


                                                    (ಚಿತ್ರ: ಧ್ಯಾನಲಿಂಗ, ಕೊಯಮತ್ತೂರು)
ಸದ್ಗುರು ತಮ್ಮ ಜ್ಞಾನಸುಧೆಯನ್ನು ಕಳೆದೆರಡು ದಶಕಗಳಿಂದ ವಿಶ್ವದ ಮುಂದೆ ಹರವಿಟ್ಟ ಬಗೆಯೇ ಬೆರಗುಹುಟ್ಟಿಸುವಂಥದ್ದು! ಸದ್ಗುರು ಬಹುಶಃ ಮಾತನಾಡದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳೇ ಇಲ್ಲ. ಅದು ವಿಶ್ವಸಂಸ್ಥೆಯಾಗಿರಬಹುದು, ಯುನೆಸ್ಕೊ ಆಗಿರಬಹುದು, ವರ್ಲ್ಡ್ ಇಕೊನಾಮಿಕ್ ಫಾರ್ಮ್ ಆಗಿರಬಹುದು, ವಿಶ್ವಪ್ರಸಿದ್ಧ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಟೆಡ್ ಆಗಿರಬಹುದು, ಭಾರತದ ಐಐಟಿ, ಐಐಎಮ್ ಗಳಿರಬಹುದು ಸದ್ಗುರುವಾಣಿ ಇಲ್ಲೆಲ್ಲ ಪ್ರತಿಧ್ವನಿಸಿದೆ. ವಿಶ್ವಪ್ರಸಿದ್ಧ ವಿಜ್ಞಾನಿಗಳು, ವಿದ್ವಾಂಸರು ಎಲ್ಲರೂ ಸದ್ಗುರುಗಳೊಂದಿಗೆ ಸಂವಾದ ನಡೆಸಿದ್ದಾರೆ ಹಾಗೂ ಇವರ ಅಪಾರ ಜ್ಞಾನಕ್ಕೆ ತಲೆದೂಗಿದ್ದಾರೆ.




ಅವರ ಯೋಗ ಕಾರ್ಯಕ್ರಮಗಳೂ ವಿಶ್ವಮಟ್ಟದಲ್ಲಿ, ಬಹಳ ದೊಡ್ದ ಸ್ಕೇಲ್ ನಲ್ಲಿ ಅರ್ಪಿತವಾಗುತ್ತಾ ಬಂದಿವೆ. ಇಂದು ಬಹುಶಃ 500-700 ಮಿಲಿಯನ್ ಜನ ವಿಶ್ವದಾದ್ಯಂತ ಇನ್ನರ್ ಇಂಜಿನಿಯರಿಂಗ್ ಮಾಡಿದ್ದಾರೆ. ಈಶಾ ಸಂಪೂರ್ಣ ಸ್ವಯಂಸೇವಕರಿಂದಲೇ ನಡೆಯುತ್ತಿರುವ ಸಂಸ್ಥೆ. ಸುಮಾರು 10 ಮಿಲಿಯನ್ ಗೂ ಅಧಿಕ ಸ್ವಯಂಸೇವಕರು ಈ ಸಂಸ್ಥೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  
ಸದ್ಗುರು ಸೃಷ್ಟಿಸಿದ ‘ರ‍್ಯಾಲಿ ಫಾರ್ ರಿವರ್ಸ್’ ಜಗತ್ತಿನ ಅತ್ಯಂತ ದೊಡ್ಡ ಪರಿಸರ ಸಂರಕ್ಷಣಾ ಆಂದೋಲನವಾಯಿತು. ದೇಶದಾದ್ಯಂತ 16 ಕೋಟಿ ಜನ ಇದನ್ನು ಬೆಂಬಲಿಸಿದರು. ಪಕ್ಷಭೇದ ಮರೆತು 15 ರಾಜ್ಯಸರ್ಕಾರಗಳು ಬೆಂಬಲಕ್ಕೆ ನಿಂತವು. ಇವೆಲ್ಲದರ ಪರಿಣಾಮ ರ‍್ಯಾಲಿ ಫಾರ್ ರಿವರ್ಸ್ ನ ನೀತಿಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ರಾಜ್ಯಗಳಿಗೆ ಶಿಫಾರಸ್ಸು ಮಾಡಿತು. ಒಂದು ಅನುಕರಣೀಯ ಮಾಡೆಲ್ ಆಗಿ ಕಾವೇರಿಯನ್ನು ಆಯ್ದುಕೊಂಡು, ಈಶಾ ಫೌಂಡೇಶನ್ ಕಳೆದೆರಡು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಕೆಲಸಗಳನ್ನು ಮಾಡುತ್ತಿದೆ. ಇದು ರೈತರಿಗೆ ಅಪಾರ ಲಾಭ ತರಬಲ್ಲ ಹಾಗೂ ಕಾವೇರಿಯ ಪುನರುಜ್ಜೀವನಕ್ಕೂ ಕಾರಣವಾಗಬಲ್ಲ ’ಅರಣ್ಯ ಕೃಷಿ’ಯ ಕೆಲಸ. 2020ರ ಸಾಲಿನಲ್ಲಿ ಅಮೋಘ 1.1 ಕೋಟಿ ಸಸಿಗಳನ್ನು ಜಲಾನಯನ ಪ್ರದೇಶದಲ್ಲಿ ನೆಡಲಾಗಿದೆ. 12 ವರ್ಷಗಳಲ್ಲಿ 242 ಕೋಟಿ ಸಸಿಗಳನ್ನು ನೆಡಬೇಕೆಂಬುದು ಗುರಿ. ಇವೆಲ್ಲ ಸಾಧ್ಯವಾದದ್ದು ಸದ್ಗುರುಗಳ ವರ್ಚಸ್ಸು ಹಾಗೂ ಅಪಾರ ಶ್ರಮದಿಂದ. 


ಇಂದು ವಿಶ್ವಸಂಸ್ಥೆಗೆ ನೀರಿನ ಬಗ್ಗೆ, ಪರಿಸರದ ಬಗ್ಗೆ, ಮಣ್ಣಿನ ಬಗ್ಗೆ ಮಾತನಾಡಲೂ ಸದ್ಗುರು ಬೇಕು, ಅಂತರಾಷ್ಟ್ರೀಯ ಯೋಗ ದಿನಕ್ಕೂ ಸದ್ಗುರು ಬೇಕು. ಇವರ ಜ್ಞಾನಸುಧೆಯನ್ನು, ಪರಿಸರ ಕಾರ್ಯಕ್ರಮಗಳನ್ನು ವಿಶ್ವವೇ ಬೆರಗುಗಣ್ಣುಗಳಿಂದ ನೋಡುತ್ತಿದೆ. ಇವರ ಕೆಲಸಗಳನ್ನು ಮನ್ನಿಸಿ, ಸರ್ಕಾರ ಪರಿಸರದ ಕೆಲಸಗಳಿಗಾಗಿ ಭಾರತದ ಅತ್ಯುನ್ನತ ಪುರಸ್ಕಾರವಾದ ’ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ್’ಅನ್ನು ಹಾಗೂ ಅತ್ಯುನ್ನತ ವಾರ್ಷಿಕ ನಾಗರೀಕ ಪ್ರಶಸ್ತಿ ’ಪದ್ಮವಿಭೂಷಣ’ಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವರ ಯೋಗ ಕಾರ್ಯಕ್ರಮಗಳಲ್ಲಿ ವಿಶ್ವದ ಕೋಟ್ಯಂತರ ಜನರು ಮಿಂದೇಳುತ್ತಿದ್ದಾರೆ. ಅವರ ಬದುಕನ್ನು ಅದು ಸಂಪೂರ್ಣವಾಗಿ ಬದಲಿಸಿದ್ದನ್ನು ಅವರೇ ಹೇಳಿಕೊಳ್ಳುತ್ತಾರೆ. ಬೆಂಗಳೂರಲ್ಲೇ ಅವರ ಕಾರ್ಯಕ್ರಮಗಳನ್ನು ಮಾಡಿದ ಡಾಕ್ಟರುಗಳು, ಇಂಜಿನಿಯರುಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹೀಗೆ ಲಕ್ಷಾಂತರ ಜನ ನಿಮಗೆ ಸಿಗುತ್ತಾರೆ. ಅಪಾರ ಕೃತಜ್ಞತೆಯಿಂದ ಸದ್ಗುರುಗಳನ್ನು ಪೂಜಿಸುತ್ತಾರೆ. 
ಇಂಥವರು ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಹಾಗೂ ಹೆಮ್ಮೆ. ಇಂಥಹ ಸಂತರು ಮತ್ತು ಋಷಿಗಳಿಂದಲೇ ಭಾರತ ಮಾತೆ ವಿಶ್ವದಾದ್ಯಂತ ತನ್ನ ಅಪಾರ ಅಧ್ಯಾತ್ಮ ಹಾಗೂ ಜ್ಞಾನ ಸಂಪತ್ತನ್ನು ಬೀರಲು ಸಾಧ್ಯವಾಗಿರುವುದು. ಇವರು ಮತ್ತಷ್ಟು ಜನರ ಬದುಕಿನ ದಾರಿದೀಪವಾಗಲಿ. ಭಾರತದ ಅಧ್ಯಾತ್ಮ ಸಂಪತ್ತು ‘ಜಗ’ಮಗಿಸಲಿ.

Wednesday, August 18, 2021

ಮೈಮರೆಯದಿರಿ, ಸ್ವಾತಂತ್ರ್ಯ ಅಷ್ಟು ಹಗುರವಾದ ವಸ್ತುವಲ್ಲ!


ನಿನ್ನೆ ನಮ್ಮ ಸ್ವಾತಂತ್ರ್ಯೋತ್ಸವದ ದಿನವೇ ಈ ಘಟನೆ ನಡೆದಿದ್ದು ಕಾಕತಾಳೀಯ. ಅಫ್ಘಾನಿಸ್ತಾನ ತಾಲಿಬಾನ್ ನ ತೆಕ್ಕೆಗೆ ಬಿದ್ದಿದೆ. ಅಲ್ಲಿನ ಸರ್ಕಾರ ಉಗ್ರ ಪಡೆಗಳ ಮುಂದೆ ಮಂಡಿಯೂರಿ ಕುಳಿತಿದೆ.

ಯಾಕೆ ನಮ್ಮ ಸ್ವಾತಂತ್ರ್ಯೋತ್ಸವನ್ನು ಇದಕ್ಕೆ ಲಿಂಕ್ ಮಾಡಿದೆ ಎಂದರೆ ಈ ಘಟನೆ ನಮಗೆ ಒಂದು Reminder ಆಗಬೇಕು. ಸ್ವಾತಂತ್ರ್ಯ ಅಂದರೆ ಏನು? ಅದರ ಬೆಲೆ ಎಂಥದ್ದು? ನಾವು ಎಂಥಹ ಮಹತ್ವದ ಸಾಧ್ಯತೆಯಲ್ಲಿ ಬದುಕುತ್ತಿದ್ದೇವೆ ಎಂಬುದು ನಮಗೆ ಅರಿವಾಗಬೇಕು.

ಯಾವುದೇ ದೇಶವಿರಲಿ, ಯಾವುದೇ ಸಮಾಜವಿರಲಿ, ಅದನ್ನು ಪೋಷಿಸಲು, ಸುಸ್ಥಿತಿಯಲ್ಲಿ ಇಡಲು, ಹಲವಾರು ವ್ಯವಸ್ಥೆಗಳು ಸಾಮರಸ್ಯದಲ್ಲಿ ಕೆಲಸಮಾಡಬೇಕಾಗುತ್ತದೆ. ಆ ದೇಶದ ಆಡಳಿತ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಆಹಾರ ಉತ್ಪಾದನೆ/ಕೃಷಿ, ಸಂಚಾರ, ವಿವಿಧ ಸರಕು-ಸಾಮಗ್ರಿಗಳ ಸಾಗಣೆ,  ಶಿಕ್ಷಣ ಹೀಗೆ ಹಲವು ವ್ಯವಸ್ಥೆಗಳು ಒಂದು ಮಟ್ಟಿಗಿನ ಶಿಸ್ತಿನಲ್ಲಿ, ಬದ್ಧತೆಯಲ್ಲಿ ಕೆಲಸಮಾಡಬೇಕಾಗುತ್ತದೆ. ಇಲ್ಲ ಅಂದರೆ ಆ ದೇಶವಿಲ್ಲ. ಸಮಾಜವಿಲ್ಲ.


ನಮ್ಮ ದೇಶ 1947ರಲ್ಲಿ ಸ್ವತಂತ್ರವಾದಾಗ ಶ್ರೀಮಂತ ದೇಶವಾಗಿರಲಿಲ್ಲ. ಕೋಟ್ಯಂತರ ಜನರಿಗೆ ಹೊಟ್ಟೆಗೆ ಹಿಟ್ಟಿರಲಿಲ್ಲ. ನಮಗೆ ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ Life Expectancy ಅಂದರೆ ಸರಾಸರಿ ಪ್ರಜೆಯೊಬ್ಬ ಬದುಕುವ ಕಾಲ ಕೇವಲ 33 ವರ್ಷ ಆಗಿತ್ತು ಎಂದರೆ ನಂಬುವಿರೇ? ಅಂಥಹ ದೇಶವನ್ನು ಸಂಭಾಳಿಸುವುದು, ಮುನ್ನಡೆಸುವುದು, ಜನರಿಗೆ ಗೌರವಾನ್ವಿತ ಬದುಕನ್ನು ಒದಗಿಸುವುದು ಖಂಡಿತ ಸುಲಭದ ಕೆಲಸವಾಗಿರಲಿಲ್ಲ.

ಅಂದಿನಿಂದ ಇಂದಿನವರೆಗೆ ಬಹಳ ಸುಧಾರಣೆಗಳಾಗಿವೆ. ಭಾರತ ಆಹಾರದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ನಡೆದ 5 ಯುದ್ಧಗಳಲ್ಲಿ ನಾಲ್ಕನ್ನು ಗೆದ್ದಿದೆ. ಸದೃಢ ಸೈನ್ಯವನ್ನು ನಿರ್ಮಿಸಿಕೊಂಡಿದೆ. ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಗ್ರಹಗಳ ಮೂಲಕ ಸಂಪರ್ಕ ವ್ಯವಸ್ಥೆಗೆ ಸ್ವಾವಲಂಬಿಯಾಗಿದೆ. ಆಣೆಕಟ್ಟುಗಳು, ವಿದ್ಯುತ ಉತ್ಪಾದನಾ ಘಟಕಗಳು, ಒಳ್ಳೆಯ ರೋಡುಗಳು ನಿರ್ಮಾಣವಾಗಿವೆ. ವಿಶ್ವದ ಅನೇಕ ದೇಶಗಳ ಮುಂದೂ ಭಾರತ ಮಿಂಚುತ್ತಿದೆ. ನಮ್ಮಲ್ಲಿ ಬಹಳ ಸಮಸ್ಯೆಗಳು ಇಂದಿಗೂ ಇವೆ. ಅದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಆದರೆ, ಒಂದು ಮಟ್ಟಿಗಿನ ಗೌರವಯುತ ಜೀವನವನ್ನು ನಾವೆಲ್ಲರೂ ನಿರ್ವಹಿಸುತ್ತಿದ್ದೇವೆ.


ಆದರೆ ಈ ಸ್ವಾತಂತ್ರ್ಯ, ಈ ಗೌರವ, ಈ ಆರೋಗ್ಯ, ಈ ಹಣ, ಈ ಉಪಗ್ರಹಗಳು, ಸೈನ್ಯ, ರಸ್ತೆಗಳು, ಶಾಲೆಗಳು ಇವೆಲ್ಲವೂ ಸುಮ್ಮನೆ ಬಂದಿದ್ದಲ್ಲ. ಈ ದೇಶವನ್ನು ಇಲ್ಲಿಗೆ ತರಲು ಕೋಟ್ಯಂತರ ಜನ ಜೀವವನ್ನೇ ಕೊಟ್ಟಿದ್ದಾರೆ. ಇಂದಿಗೂ ಕೊಡುತ್ತಿದ್ದಾರೆ. ನಾವಿಂದು ರಾತ್ರಿ ನೆಮ್ಮದಿಯಿಂದ ಮಲಗುತ್ತೇವೆ ಎಂದರೆ ಕಾರಣ, ಅದಕ್ಕೆ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕ. ಆತನಿಗೂ ಹೆಂಡತಿ, ಮಕ್ಕಳಿದ್ದಾರೆ. ಕುಟುಂಬ ಇದೆ. ಆದರೂ ಆತ ಶತ್ರುವಿಗೆ ಎದೆಕೊಟ್ಟು ನಮ್ಮನ್ನು ಕಾಯಲು ಸಿದ್ಧನಿದ್ದಾನೆ. ರೈತರು ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇಲ್ಲ. ಆದರೂ ಅವರು ಧೃತಿಗೆಡದೆ ಕೃಷಿ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಇವತ್ತು ನಮ್ಮ ಪ್ಲೇಟಿನಲ್ಲಿ ಅನ್ನವಿದೆ. ಹೀಗೆ ವಿವಿಧ ರೀತಿಯ ಕಾರ್ಮಿಕರು, ತಂತ್ರಜ್ಞರು, ರಕ್ಷಕರು, ಶಿಕ್ಷಕರು, ಆಡಳಿತಗಾರರು ಎಲ್ಲರೂ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾಕೆ ಇವನ್ನೆಲ್ಲ ಹೇಳುತ್ತಿದ್ದೇನೆ ಎಂದರೆ - ಇದು ಒಂದು ಸೂಕ್ಷ್ಮ ವ್ಯವಸ್ಥೆ. ಇದರ ಬೆಲೆ ಅರಿಯದೆ ನಾವು ಒಂದು ಸ್ವಲ್ಪ ಮೈಮರೆತರೂ ಶತ್ರು ಕಾಯುತ್ತ ಕುಳಿತಿದ್ದಾನೆ. ಶತ್ರು ಎಂದಾಕ್ಷಣ ಅವ ಗಡಿಯ ಹೊರಗೆ ಇರುವವ ಮಾತ್ರ ಅಂತಲ್ಲ. Ofcourse, ಗಡಿಯ ಸುತ್ತಲೂ ಇದ್ದಾನೆ. ಆದರೆ ಒಳಗೂ ಈಗಾಗಲೇ ಹಲವರು ಇದ್ದಾರೆ. ಅಥವಾ ಒಮ್ಮೆ ಈ ವ್ಯವಸ್ಥೆ ತಲೆಕೆಳಗಾದರೆ, ನಮ್ಮಲ್ಲೇ ಅನೇಕರು ಹುಟ್ಟಿಕೊಳ್ಳಲೂಬಹುದು! ಸಾಧ್ಯವಿದೆ ಅಲ್ಲವೇ? ಸಾಮಾಜಿಕ ವ್ಯವಸ್ಥೆ ತಲೆಕೆಳಗಾದಾಗ ಸಾರ್ವಜನಿಕರೇ ಆಂತರಿಕ ಶತ್ರುಗಳಾಗಿ ಬದಲಾಗುತ್ತಾರೆ ಅಲ್ಲವೇ?

ಆದ್ದರಿಂದ ದೇಶದಲ್ಲಿ ಸುವ್ಯವಸ್ಥೆಯನ್ನು, ಸದೃಢ ಸಮಾಜವನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶ ಎಂಬ ಹಿರಿಮೆಯನ್ನು, ಭಾವನೆಯನ್ನು, ಸಾಮಾಜಿಕ ಪ್ರಜ್ಞೆಯನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಆಗ ಮಾತ್ರ ಈ ದೇಶದಲ್ಲಿ ಸದೃಢ ಸಮಾಜ ಹಾಗೂ ವ್ಯವಸ್ಥೆ ಇರಲು ಸಾಧ್ಯ. ಸ್ವಾತಂತ್ರ್ಯ ನಂತರ ಕಟ್ಟಿಕೊಂಡಿರುವ ಅನೇಕ ಸಂಗತಿಗಳು ಉಳಿಯಲು ಸಾಧ್ಯ. ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯ ಎಂದರೆ, “ಸಮಾಜದಲ್ಲಿ ಅನ್ಯಾಯವಾಗುತ್ತಿದೆ” ಎಂಬ ವಿಚಾರ ಬಂದಾಗ ಆ ಸಮಾಜ ಎಂಬುದು ನಾನೇ/ವೇ ಎಂಬುದನ್ನು ನೆನಪಿಸಿಕೊಳ್ಳಬೇಕು. ಆ ಸಮಸ್ಯೆಯ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳಬೇಕು. ನಮ್ಮ ಕೈಯಲ್ಲಿ ಏನು ಸಾಧ್ಯವೋ ಅದನ್ನು ಕುಂದಿಲ್ಲದಂತೆ ಮಾಡಬೇಕು. ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದೇ? ಇಲ್ಲ. ಸಮಸ್ಯೆಗಳಿಲ್ಲದ ಸಮಾಜ ಇಲ್ಲ. ಆದರೆ ಇನ್ನಷ್ಟು ಸಾಮರಸ್ಯದ ಹಾಗೂ ಆರೋಗ್ಯವಾದ ಸಮಾಜವನ್ನು ಖಂಡಿತವಾಗಿ ನಿರ್ಮಿಸಬಹುದು.

ನಾವು, ನಾವೇ ನಿರ್ಮಿಸಿಕೊಂಡ ವ್ಯವಸ್ಥೆಗಳ, ಪಡೆದುಕೊಂಡ ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ ಮಹತ್ವವನ್ನು ಯಾವ ಕ್ಷಣವೂ ಮರೆಯಬಾರದು. ಹಾಗೂ ನಾವು ಇಂದು ಸುರಕ್ಷಿತವಾಗಿ ಬದುಕಲು ಸಮಾಜದ ಅನೇಕರು ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಸಮಸ್ಯೆಗಳು ಬಂದಾಗ ಅದರ ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸಬೇಕು. ಕೋಮು, ಜಾತಿ, ರಾಜ್ಯ, ಧರ್ಮ, ಭಾಷೆ ಇವುಗಳ ಹೆಸರಿನಲ್ಲಿ ವೈಮನಸ್ಯಗಳನ್ನು, ವಿಭಜನೆಗಳನ್ನು ಸೃಷ್ಟಿಸಿಕೊಳ್ಳಬಾರದು. ನಮ್ಮ ನಡುವೆ ವಿಷ ಬಿತ್ತಲು ಯಾರದರೂ ಪ್ರಯತ್ನಿಸಿದರೆ, ಅಂತಹ ಶಕ್ತಿಗಳನ್ನು ಹೆಡೆಮುರಿಕಟ್ಟುವ ಬದ್ಧತೆ ನಮ್ಮಲ್ಲಿರಬೇಕು. ಅಂಥದ್ದಕ್ಕೆ ಸೊಪ್ಪು ಹಾಕುವಷ್ಟು ಮೂರ್ಖರಾಗಬಾರದು.

ಇಂಥಹ ಪ್ರಜ್ಞೆಯಿಂದ, ಪರಸ್ಪರ ಗೌರವ ಹಾಗೂ ಕೃತಜ್ಞತೆಯಿಂದ ಬದುಕಿದರೆ ಬಲಿಷ್ಠ ರಾಷ್ಟ್ರವಾಗಿ, ನಾವು ವಿಶ್ವಕ್ಕೇ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. ಸಾಮರಸ್ಯದಿಂದ, ಪ್ರಜ್ಞಾಪೂರ್ವಕವಾಗಿ ಬದುಕುವ ಬದ್ಧತೆಯನ್ನು ತೆಗೆದುಕೊಳ್ಳೋಣ. ನಮ್ಮ ಮುಂದೆಯೇ ಅಫ್ಘಾನ್ ನ ಉದಾಹರಣೆಯಿರುವುದರಿಂದ, ಈ ಬದ್ಧತೆಯನ್ನು ಮರುಸ್ಥಾಪಿಸಿಕೊಳ್ಳಲು, ಮತ್ತಷ್ಟು ಬಲಪಡಿಸಿಕೊಳ್ಳಲು ಇದಕ್ಕಿಂತ ಸುಸಮಯ ಇಲ್ಲ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು.


~ ಸಂಕೇತ್ ಡಿ ಹೆಗಡೆ

Wednesday, July 7, 2021

ಧೋನಿ!



ಧೋನಿ. ಈತ ಅನೇಕ ಕ್ರಿಕೆಟಿಗರಲ್ಲಿ ವಿಶಿಷ್ಟವಾಗಿ ನಿಲ್ಲುವವ. ಬಹುಶಃ, ವಿಶ್ವ ಕ್ರಿಕೆಟ್ ಕಂಡ ಅತ್ಯಂತ ವಿಶಿಷ್ಟ ಕ್ಯಾಪ್ಟನ್ ಗಳಲ್ಲಿ ಒಬ್ಬ.


ಈತನಿಗೆ ಮೆರಗು ನೀಡುವುದು ಈತನ ‘ಕೂಲ್ ಹೆಡ್’. ಎಂಥಹದ್ದೇ ಸಂದರ್ಭವಿರಲಿ, ಈತ ಮಂಡೆಬಿಸಿಮಾಡಿಕೊಂಡಿದ್ದು ಕಡಿಮೆ. ಸಂಭ್ರಮದ ಸಮಯಗಳಲ್ಲೂ ಆವೇಶ ತೋರಿಸಿದ್ದು ಕಡಿಮೆ.

ಬಹುಶಃ ಈ ನಿಶ್ಚಲ ಮನಸ್ಸೇ, ಆತನ ಅಗಾಧ ಬುದ್ಧಿವಂತಿಕೆ, ಸಮಯಪ್ರಜ್ಞೆ ಮುಂತಾದವುಗಳಿಗೆ ಕಾರಣವೂ ಇರಬಹುದು.


ಧೋನಿ ಫೀಲ್ಡಿನಲ್ಲಿದ್ದರೆ, ಅದೇನೋ ಒಬ್ಬ ಮೆಚ್ಯೂರ್ಡ್ ಮನುಷ್ಯ ಫೀಲ್ಡಿನಲ್ಲಿದ್ದಾನೆ ಎಂಬ ಅಭಯ. ಈತನಿಗೆ ಎಲ್ಲಿ ಹೇಗೆ ಆಡಬೇಕು ಎಂದು ಗೊತ್ತು ಎಂಬ ಧೈರ್ಯ. ಕೆಲವೊಂದು ಪಂದ್ಯಗಳಲ್ಲಿ, ಫಿನಿಷರ್ ಆಗಿ ಬಂದು ಸೋಲುವ ಪಂದ್ಯಗಳನ್ನು ಗೆಲ್ಲಿಸಿದ್ದರ ಹಿಂದೂ ಈತನ ಸಮಚಿತ್ತತೆಯ ಪಾತ್ರ ಬಹುದೊಡ್ಡದಿದೆ ಎಂಬುದು ನನ್ನ ಭಾವನೆ.


ಭಾರತದ ತುಂಬೆಲ್ಲ ಕ್ರಿಕೆಟ್ಟೆ ಕುಣಿದಾಡುತ್ತಿದ್ದರೂ, ಇಲ್ಲಿ ಅದೊಂದು ಧರ್ಮವೇ ಆಗಿಹೋಗಿದ್ದರೂ, ಭಾರತೀಯ ಕ್ರಿಕೆಟ್ ನ ಅಂತರಾಷ್ಟ್ರೀಯ ಪರ್ಫಾರ್ಮೆನ್ಸ್ ತೀರಾ ಟಾಪ್ ಕ್ಲಾಸ್ ಇರಲಿಲ್ಲ. ವಿಶ್ವಕಪ್ ಅಂತೂ ಬಹುದೊಡ್ದ ಮರೀಚಿಕೆಯೇ ಆಗಿತ್ತು.


ಆ ಸಮಯದಲ್ಲಿ ಬಂದ ಧೋನಿ ಮಾಡಿದ್ದು ಮ್ಯಾಜಿಕ್ ಅಂತಲೇ ಹೇಳಬೇಕು. 2007ರ ಟಿ-20 ವಿಶ್ವಕಪ್ ಕ್ಯಾಪ್ಟನ್ ಆಗಿ ಆತನ ಮೊದಲ ಟೂರ್ನಿ. ಆ ಟೂರ್ನಿಯ ಮೊದಲ ಮ್ಯಾಚ್, ಕ್ಯಾಪ್ಟನ್ ಆಗಿ ಆತನ ಮೊದಲ ಮ್ಯಾಚ್! ಬಂದ ಮೆಟ್ಟಿನಲ್ಲೇ ವಿಶ್ವಕಪ್ ಗೆದ್ದು ವಿಶ್ವವನ್ನೆಲ್ಲ ನಿಬ್ಬೆರಗಾಗಿಸಿದ್ದ ಪೋರ ಈತ! 


ನಂತರ 2011ರ ಏಕದಿನ ಪಂದ್ಯಗಳ ವಿಶ್ವಕಪ್ ಅಂತೂ, ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ.

ನನ್ನ ಪ್ರಕಾರ ನಾವು ಆತನಿಂದ ಕಲಿಯಬೇಕಾಗಿರುವುದು ಆತನ ಸಮಚಿತ್ತತೆ, ನಿರುಮ್ಮಳತೆ. ನಾವು ಧೋನಿ ಆಗುತ್ತೇವೋ ಇಲ್ಲವೋ, ನಾಯಕನಾಗುತ್ತೇವೋ ಇಲ್ಲವೋ, ಆದರೆ ನಾವು ಏನು ಮಾಡುತ್ತಿದ್ದೇವೋ ಅದನ್ನು ಮತ್ತಷ್ಟು ದಕ್ಷವಾಗಿ ಮಾಡಲಂತೂ ಖಂಡಿತ ಸಾಧ್ಯವಾಗುತ್ತೆ. ನಮ್ಮೊಳಗಿನ ನಮ್ಮ ಪ್ರತಿಭೆಗಳು ಸ್ವಚ್ಛಂದವಾಗಿ ಹೊರಹೊಮ್ಮಲು ಖಂಡಿತ ಸಾಧ್ಯವಾಗುತ್ತೆ.


ಧೋನಿಗೆ ಹುಟ್ಟುಹಬ್ಬದ ಶುಭಾಶಯ. ಅವನಿಂದ ಇವುಗಳನ್ನು ಕಲಿತರೆ, ನಮಗೂ ಶುಭಾಶಯ 🙂


ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...