ಈ ವರ್ಷದ ‘ಯೋಗ ದಿನ’ ಮುಗಿದಿದೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ತರೇಹಾವಾರಿ ಫೋಟೋಗಳನ್ನು, ಬರಹಗಳನ್ನು, ಜೋಕ್ ಗಳನ್ನು ಹಂಚಿಕೊಂಡಿದ್ದಾರೆ. ’ನಾನೂ ಯೋಗ ಮಾಡುತ್ತೇನೆ - ಶವಾಸನ ಮಾಡುತ್ತೇನೆ” ಎಂದು ಹೇಳಿ ನಕ್ಕಿದ್ದಾರೆ. ಕ್ಲಬ್ ಹೌಸ್ ನಲ್ಲಿ ಅನೇಕ ಚರ್ಚೆಗಳು ನಡೆದಿವೆ. ಯೋಗ ಹೇಗೆ ಭಾರತದ ಪರಂಪರೆ ಕೊಟ್ಟ ಕೊಡುಗೆ, ಅದಕ್ಕಾಗಿ ನಾವು ಹೇಗೆ ಹೆಮ್ಮೆ ಪಡಬೇಕು ಎಂದು ಅನೇಕರು ಮಾತನಾಡಿದ್ದಾರೆ. ಬಹಳ ಸಂತಸದ ವಿಷಯ. ಅಷ್ಟಕ್ಕೂ, ‘ಅಂತರಾಷ್ಟ್ರೀಯ ಯೋಗ ದಿನ’ವನ್ನು ಪ್ರಾರಂಭಿಸಿದ್ದೇ ಈ ಕಾರಣಕ್ಕಾಗಿ. ಯೋಗದ ಕುರಿತು ಜನ ಮಾತಾಡಲಿ, ಅದರ ಕುರಿತು ಜಾಗೃತಿ ಮೂಡಲಿ ಎಂದು.
ಆದರೆ, ಯೋಗದಲ್ಲಿ ನೀವು ಇದು ಭಾರತೀಯ ಸಂಸ್ಕೃತಿಯ ಕೊಡುಗೆ ಎಂದು ಹೆಮ್ಮೆ ಪಡುವುದಕ್ಕಿಂತ ದೊಡ್ಡ ಪ್ರಯೋಜನಗಳಿವೆ. ಕೊಡುಗೆ ನಮ್ಮ ಸಂಸ್ಕೃತಿಯದ್ದೇ ಆದರೂ, ಅದನ್ನು ಅರಿತುಕೊಳ್ಳದಿದ್ದರೆ, ಶಾಸ್ತ್ರೀಯವಾಗಿ ಕಲಿಯದಿದ್ದರೆ ಹಾಗೂ ಅಭ್ಯಸಿಸದಿದ್ದರೆ - ಅದು ನಮ್ಮ ಪೂರ್ವಜರ ಕೊಡುಗೆ ಎಂಬ ಹೆಮ್ಮೆಗಷ್ಟೇ ತೃಪ್ತಿಕೊಳ್ಳಬೇಕಾಗುತ್ತೆ. ಶವವಾಗಲು ಅಭ್ಯಾಸ ಬೇಡ - ಎಲ್ಲರೂ ಒಂದಲ್ಲ ಒಂದು ದಿನ ಆಗಲೇಬೇಕು. ಆದ್ದರಿಂದ, ನಾನು ಶವಾಸನ ಮಾಡಿದೆ ಎಂದು ಹೆಮ್ಮೆಪಟ್ಟುಕೊಂಡರೆ, ಯೋಗದ ಬಹುದೊಡ್ಡ ಸಾಧ್ಯತೆಗಳಿಂದ ವಂಚಿತರಾಗಬೇಕಾಗುತ್ತದೆ.
ಯೋಗದ ಮೂಲ ಆದಿಯೋಗಿ ಶಿವ. ಕೈಲಾಸವಾಸಿಯಾಗಿದ್ದ ಶಿವ, 15,000ಕ್ಕೂ ಅಧಿಕ ವರ್ಷಗಳ ಹಿಂದೆ ಮಾನಸಸರೋವರದ ತಟದಲ್ಲಿ ದಕ್ಷಿಣಾಮೂರ್ತಿಯಾಗಿ ಕುಳಿತು, ಸಪ್ತಋಷಿಗಳಿಗೆ ‘ಯೋಗ ವಿಜ್ಞಾನ’ ಎಂಬ ಆತಂರಿಕ ವಿಜ್ಞಾನವನ್ನು ಬೋಧಿಸಿದ. ಆ ಸಪ್ತಋಷಿಗಳು ವಿಶ್ವದೆಲ್ಲೆಡೆ ಸಂಚರಿಸಿ, ಅನೇಕ ಸ್ಥಳಗಳಲ್ಲಿ, ಅನೇಕ ಸಮಾಜಗಳಲ್ಲಿ ಯೋಗ ವಿಜ್ಞಾನವನ್ನು ಪಸರಿಸಿದರು. ಈ ಕಾರಣಕ್ಕಾಗಿಯೇ ವಿಶ್ವದ ಎಲ್ಲೆಡೆಯೂ ಒಂದಲ್ಲ ಒಂದು ಪ್ರಕಾರದ ಯೋಗಶಾಲೆಗಳು ಕಂಡುಬರುವುದು. ಯುರೋಪ್ ನ ಹಲವು ಸ್ಥಳಗಳಲ್ಲಿ ಕೂಡ ಯೋಗವಿಜ್ಞಾನದ ಆಧಾರದಲ್ಲಿ ನಿರ್ಮಿಸಿದ ದೇವಸ್ಥಾನಗಳು ನಿಮಗೆ ಇಂದಿಗೂ ಕಾಣಸಿಗುತ್ತವೆ.
ಪತಂಜಲಿ ‘ಯೋಗಸೂತ್ರ’ವನ್ನು ಬರೆದ ಮಹರ್ಷಿ. ಅವರ ಕಾಲ ಬರುವಷ್ಟರಲ್ಲಿ ಯೋಗ ಅನೇಕ ವಿಧಗಳಲ್ಲಿ, ಅನೇಕ ರೂಪಗಳಲ್ಲಿ, ಹರಡಿಹೋಗಿತ್ತು. ಸ್ವಲ್ಪ ಅವ್ಯವಸ್ಥೆಯೂ ತಲೆದೂಗಿರಬೇಕು. ಆದ್ದರಿಂದ ಪತಂಜಲಿ ಮಹರ್ಷಿ ಅವೆಲ್ಲವನ್ನೂ ಕ್ರೋಢೀಕರಿಸಿ, ಯೋಗಸೂತ್ರದ ಮೂಲಕ stream line ಮಾಡಿದರು. ವ್ಯವಸ್ಥಿತಗೊಳಿಸಿದರು.
ಯೋಗದಲ್ಲಿ ಮುಖ್ಯವಾಗಿ 4 ಮಾರ್ಗಗಳು - ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಕ್ರಿಯಾಯೋಗ. ನಾಲ್ಕರಲ್ಲೂ - ಯಾವುದೂ ಮೇಲೂ ಅಲ್ಲ, ಕೀಳೂ ಅಲ್ಲ. ಕೊನೆಯ ಸಾಧ್ಯತೆ ನಾಲ್ಕು ಮಾರ್ಗಗಳಿಗೂ ಒಂದೇ. ಆದರೆ ಅದೇ ಗಮ್ಯವನ್ನು ತಲುಪಲು ನಾಲ್ಕು ಬೇರೆ ಬೇರೆ ಮಾರ್ಗಗಳು.
ಜ್ಞಾನಯೋಗ - ಇದು ಬುದ್ಧಿ ಅಥವಾ intellect ಅನ್ನು ತೀಕ್ಷ್ಣವಾಗಿ ಬಳಸಿ ನಮ್ಮನ್ನು ನಾವೇ ಪರಿಶೋಧಿಸಿಕೊಳ್ಳುವ ಮಾರ್ಗ. Intellect ಒಂದು ಚೂರಿ ಇದ್ದ ಹಾಗೆ. ಅದು ಎಲ್ಲವನ್ನೂ ಬಗೆದು, ತುಂಡರಿಸಿ ಮಾತ್ರ ನೋಡುತ್ತದೆ. ಅದಕ್ಕೆ ಬೇರೆ ಮಾರ್ಗ ಗೊತ್ತಿಲ್ಲ. ಒಂದು ಜಿರಲೆಯನ್ನು ಕೊಟ್ಟರೆ, ಅದು ಅದನ್ನು disect ಮಾಡಿ ಮಾತ್ರ ನೋಡಲು ಸಾಧ್ಯ. Intellect ಕೆಲಸ ಮಾಡುವುದೇ ಹಾಗೆ. ಜಿಡ್ಡು ಕೃಷ್ಣಮೂರ್ತಿ ಪ್ರಸ್ತುತಪಡಿಸುತ್ತಿದ್ದರಲ್ಲ? ಅದು ಜ್ಞಾನಯೋಗ. ಆದರೆ ಈ ಮಾರ್ಗವನ್ನು ಅನುಸರಿಸಲು ಬಹಳ ಹರಿತವಾದ ಬುದ್ಧಿಶಕ್ತಿಯ ಅವಶ್ಯಕತೆಯಿದೆ. ಅಷ್ಟು ಹರಿತವಾಗಿರುವ ಬುದ್ಧಿ ಇರುವ ಜನ ಸಿಗುವುದು ಬಹಳ ಅಪರೂಪ ಎಂಬುದು ಜ್ಞಾನಿಗಳ ಮಾತು.
ಭಕ್ತಿ ಯೋಗ - ಇದು ಬುದ್ಧಿವಂತರಿಗಲ್ಲ. ಹೌದು, ನೀವು ಅತಿಯಾಗಿ ಬುದ್ಧಿ ಉಪಯೋಗಿಸುವವರಾಗಿದ್ದರೆ, ನಿಮಗೆ ಈ ಮಾರ್ಗ ಹೊಂದುವುದಿಲ್ಲ. ಏಕೆಂದರೆ ’ಭಕ್ತರು’ ನಿಮಗೆ ಅರ್ಥವಾಗುವುದೇ ಇಲ್ಲ. ಶಿವನಿಗಾಗಿ ಬೇಡರ ಕಣ್ಣಪ್ಪ ತನ್ನ ಕಣ್ಣನ್ನೇ ಕಿತ್ತು ಕೊಟ್ಟ - ಆತ ಭಕ್ತ. ನೀವು ಬುದ್ಧಿವಂತರಾಗಿದ್ದರೆ, ನಿಮಗೆ ಇದು ಹುಚ್ಚಾಟವಾಗಿ ಕಾಣಬಹುದು. ಇದರ ಅರ್ಥವೇನು ಅನ್ನಿಸಬಹುದು. ಹೌದು, ಭಕ್ತಿ ಮಾರ್ಗದಲ್ಲಿ ಅರ್ಥಕ್ಕೆ ಅವಕಾಶವಿಲ್ಲ. ಭಕ್ತಿ ಎಂದರೆ, ನೀವು ನಿಮ್ಮನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿದ್ದೀರಿ ಎಂದರ್ಥ. ನಿಮ್ಮ ಭಕ್ತಿಯ ವಸ್ತುವಿನಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿ, ನೀವೇ ಇಲ್ಲವಾಗಿದ್ದೀರಿ ಎಂದರ್ಥ. ಹಾಗಂತ ನೀವೂ ಕಣ್ಣನ್ನು ಕಿತ್ತು ಕೊಡಬೇಕು ಅಂದಲ್ಲ. ಆದರೆ ನೀವು ಸಂಪೂರ್ಣವಾಗಿ ನಿಮ್ಮನ್ನು ನೀವೇ ಅರ್ಪಿಸಿಕೊಂಡಿದ್ದೀರಿ ಎಂದರ್ಥ. ನಿಮ್ಮ ಭಕ್ತಿಯ ವಸ್ತುವಿಗಾಗಿ ಏನನ್ನು ಬೇಕಿದ್ದರೂ ಮಾಡಲು ಸಿದ್ಧರಿದ್ದೀರಿ ಎಂದರ್ಥ.
ಕರ್ಮ ಮಾರ್ಗ - ‘ಕಾಯಕವೇ ಕೈಲಾಸ’ ಎಂಬುದನ್ನು ಕೇಳಿರುತ್ತೀರಿ. ಹಾಗಂತ, ನೀವು ಹೇಗೆ ಬೇಕೋ ಹಾಗೆ ಕೆಲಸಮಾಡಿದರೆ ಅದು ಕರ್ಮಯೋಗ ಅಲ್ಲ. ‘ನನಗೇನು ಸಿಗುತ್ತೆ?’ ಎಂಬ ಒಂದು ಪ್ರಶ್ನೆಯನ್ನು ತೆಗೆದುಹಾಕಿ ಕೆಲಸ ಮಾಡಿದರೆ ಅದು ಕರ್ಮಯೋಗ. ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ನಿಮ್ಮನ್ನು ನೀವೇ ಅರ್ಪಿಸಿಕೊಂಡು, ನೀವೇ ಇಲ್ಲವಾಗುವುದು ಕರ್ಮಯೋಗ. ನಿಮ್ಮ ಚಟುವಟಿಕೆಯಲ್ಲಿ ‘ನೀವು’ ಎಂಬುವುದು ಕರಗಿಹೋಗುವುದು ಕರ್ಮಯೋಗ.
ಇನ್ನು ‘ಕ್ರಿಯಾ ಯೋಗ’ - ಇದು ಪಕ್ಕಾ ವೈಜ್ಞಾನಿಕ ಮಾರ್ಗ. ಎರಡು ಹೈಡ್ರೋಜನ್ ಅಣು ಮತ್ತು ಒಂದು ಆಕ್ಸಿಜನ್ ಅಣುವನ್ನು ಒಬ್ಬ ದೊಡ್ಡ ವಿಜ್ಞಾನಿ ಸಂಜೋಡಿಸಿದರೂ ಅದು ನೀರಾಗುತ್ತೆ. ಒಬ್ಬ ಶತಮೂರ್ಖ ಸಂಜೋಡಿಸಿದರೂ ನೀರೇ ಆಗುತ್ತೆ. ವಿಜ್ಞಾನ ಕೆಲಸ ಮಾಡುವುದು ಹಾಗೆ. ಕ್ರಿಯಾಯೋಗ ಕೂಡ ಹಾಗೆ. ಗುರುವಿನಿಂದ ಉಪದೇಶಿಸಲ್ಪಟ್ಟ ಯೌಗಿಕ ಕ್ರಿಯೆಗಳನ್ನು ಶಿಷ್ಯ ಚಾಚೂ ತಪ್ಪದೇ ಮಾಡಿದರೆ, ಅದು ಅವನಲ್ಲಿ ಮಾಡಬೇಕಾದುದನ್ನು ಮಾಡುತ್ತದೆ. ಶಿಷ್ಯನಿಗೆ ಅದು ಹೇಗೆ ಕೆಲಸ ಮಾಡುತ್ತೆ ಎಂಬ ವಿಜ್ಞಾನದ ಅರಿವು ಇರಬೇಕಿಲ್ಲ. ಆತ ಸುಮ್ಮನೆ ಹೇಳಿದ್ದನ್ನು ಚಾಚೂ ತಪ್ಪದೇ ಮಾಡಬೇಕಷ್ಟೇ. ಅದು ಕೆಲಸಮಾಡುತ್ತೆ. ಇದು ಯಾವುದೇ ಆಧುನಿಕ ಉಪಕರಣವಿದ್ದಹಾಗೆ. ನಿಮ್ಮ ಮನೆಯ ವಾಷಿಂಗ್ ಮಶಿನ್ ನ ಹಿಂದಿನ ವಿಜ್ಞಾನ ನಿಮಗೆ ಗೊತ್ತಾ? ಇಲ್ಲ. ಆದರೆ ಅದನ್ನು ಬಳಸುವುದು ನಿಮಗೆ ಗೊತ್ತು ಹಾಗೂ ಅದು ಕೆಲಸ ಮಾಡುತ್ತೆ! ಕ್ರಿಯಾಗಳು ಕೂಡ ಹಾಗೇ, ನಿಮಗೆ ಅದರ ಹಿಂದಿನ ವಿಜ್ಞಾನ ಗೊತ್ತಿರಬೇಕಿಂದಿಲ್ಲ, ಅವುಗಳನ್ನು ಬಳಸಲು ಗೊತ್ತಿರಬೇಕು ಅಷ್ಟೇ. ಅವು ಕೆಲಸ ಮಾಡುತ್ತೆ. ಮುಖ್ಯವಾಗಿ ಕ್ರಿಯಾಗಳು ಕೆಲಸ ಇರುವುದು ನಮ್ಮ ಪ್ರಾಣಶಕ್ತಿಯ ಮಟ್ಟದಲ್ಲಿ. ನಮ್ಮ ಪ್ರಾಣಶಕ್ತಿಯನ್ನು ಪ್ರಬಲಗೊಳಿಸುವುದು, ಅದನ್ನು ತಿದ್ದಿ, ತೀಡಿ, ಹದಗೊಳಿಸುವುದು ಕ್ರಿಯಾಗಳ ಹಿಂದಿನ ವಿಜ್ಞಾನ.
ಹಾಗಿದ್ದರೆ ಈ ನಾಲ್ಕು ಮಾರ್ಗಗಳಲ್ಲಿ ಯಾವುದನ್ನು ಅನುಸರಿಸಬೇಕು? ನನಗೆ ಯಾವುದು ಒಳ್ಳೆಯದು? ಹಾಗಂತ ಏನೂ ಇಲ್ಲ. ಪ್ರತಿಯೊಬ್ಬರೂ ಈ ನಾಲ್ಕೂ ವಿಧಗಳನ್ನು ತಮಗೆ ಸರಿಹೊಂದುವ ಪ್ರಮಾಣದಲ್ಲಿ ಹೊಂದಿಸಿ ಮಿಶ್ರಣವನ್ನು ಮಾಡಿಕೊಳ್ಳಬೇಕು. ಒಂದೇ ಮಾರ್ಗವನ್ನು ಅನುಸರಿಸುತ್ತೇನೆ ಎಂದರೆ ಕಷ್ಟವಾಗಬಹುದು. ಆದರೆ ಈ ನಾಲ್ಕೂ ಮಾರ್ಗಗಳನ್ನು ತಮಗೆ ಬೇಕಾದಷ್ಟು ಹದದಲ್ಲಿ ಮಿಶ್ರಣ ಮಾಡಿ ಅನುಸರಿಸಿದರೆ ಗಮ್ಯ ತಲುಪುವುದು ಸುಲಭ. ಜೀವಂತ ಗುರುವಿನ ಮಹತ್ವ ಕೂಡ ಅದೇ. ಆತ ತನ್ನ ಪ್ರತಿ ಶಿಷ್ಯನಿಗೂ ಸರಿಯಾದ ಪ್ರಮಾಣದಲ್ಲಿ ಮಿಶ್ರಣವನ್ನು ತಯಾರಿಸಿ ಕೊಡುತ್ತಾನೆ. ಈ ನಾಲ್ಕೂ ಮಾರ್ಗಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಿಸಿ ಕೊಡುತ್ತಾನೆ. ಈ ಕುರಿತಾದ ಒಂದು ಅದ್ಭುತ ಕಥೆಯಿದೆ. ನಾಳೆ ಬರೆಯುತ್ತೇನೆ. ಆಸಕ್ತರು ಕಮೆಂಟ್ ನಲ್ಲಿ ತಿಳಿಸಿ.
~ ಸಂಕೇತ್

No comments:
Post a Comment