ನಮಗೆ ದೇವಸ್ಥಾನಗಳನ್ನು ಈ ದೇಶದಲ್ಲಿ ಏಕೆ ಕಟ್ಟಿದರು ಎಂಬ ವಾಸ್ತವವೇ ಮರೆತು ಹೋಗಿದೆ. ಇದು ದುರಂತವಾದರೂ ನಿಜ.
ದೇವಸ್ಥಾನಗಳು ಎಂದರೆ ಚಂದದ ಮೂರುತಿಯಿರುವ ಸ್ಥಳ ಅಲ್ಲ. ಸಹಸ್ರ ಕೆತ್ತನೆಗಳಿರುವ ಅಮೋಘ ವಾಸ್ತುಶಿಲ್ಪವಲ್ಲ. ಸಾವಿರಾರು ಜನ ಬಂದು ಹೋಗುವ ಒಂದು ಪಿಕ್ ನಿಕ್ ಸ್ಥಳವಲ್ಲ. ಒಂದಿಷ್ಟು ಕಠೋರ ಭಕ್ತರು ಮಡಿ ಮೈಲಿಗೆಯಲ್ಲಿ ನಡೆಸಿಕೊಂಡು ಹೋಗುತ್ತಿರುವ ನಂಬಿಕಾ ಸ್ಥಳವಲ್ಲ. ನಾವು ನೀವು ಹೋಗಿ, ದೇವರಿಗೆ ಜಗತ್ತನ್ನು ಹೇಗೆ ನಡೆಸಬೇಕು ಎಂದು advice ಮಾಡುವ ಸ್ಥಳವೂ ಅಲ್ಲ.
ಭಾರತದಲ್ಲಿ ದೇವಸ್ಥಾನಗಳ ಪರಿಕಲ್ಪನೆ, ಅಲ್ಲಿ ಹೋಗಿ ಪ್ರಾರ್ಥಿಸಬೇಕು ಎನ್ನುವುದಲ್ಲ. ಅಥವಾ ಅವು ದೇವರ, ಸೃಷ್ಟಿಕರ್ತನ ಮೇಲಿನ ಭಯದಿಂದ ಕಟ್ಟಿಸಿದ ಸ್ಮಾರಕಗಳಲ್ಲ. ಹಾಗಿದ್ದರೆ ದೇವಸ್ಥಾನಗಳು ಎಂದರೆ ಏನು? ಅವುಗಳನ್ನು ಕಟ್ಟಿಸಿದ್ದು ಏಕೆ? ಇದು ಕೇವಲ ಒಂದು ನಂಬಿಕೆಯೋ ಅಥವಾ ಇದರಿಂದ ಮಾನವತೆಗೆ ಪ್ರಯೋಜನಗಳಿವೆಯೋ?
ಮೂಲತಃವಾಗಿ ಭಾರತೀಯ ಸಂಸ್ಕೃತಿ ಬೆಳೆದು ಬಂದ ಚಿಕ್ಕ ಚಿತ್ರಣವನ್ನು ನೋಡೋಣ. ಯಾವ ಕಾಲದಲ್ಲಿ, ಪ್ರಪಂಚದ ಇನ್ನಿತರ ಸ್ಥಳಗಳಲ್ಲಿ ಮನುಷ್ಯರು ಇನ್ನೂ ಕಾಡುಗಳಲ್ಲಿ ವಾಸಿಸುತ್ತಿದ್ದರೋ, ಆ ಕಾಲದಲ್ಲಿ - ಕಲೆ, ಸಂಸ್ಕೃತಿ, ವಿಜ್ಞಾನ, ಯೋಗ, ವೇದ, ಖಗೋಳ, ಸಾಹಿತ್ಯ, ಜ್ಯೋತಿಷ್ಯ, ನೃತ್ಯ, ಸಂಗೀತ ಇವೆಲ್ಲವುಗಳ ಪರಾಕಾಷ್ಠೆಯನ್ನು ಕಂಡಿತ್ತು ಈ ನೆಲ. ಇವೆಲ್ಲ ಹೇಗೆ ಸಾಧ್ಯವಾಯಿತು? ಭಾರತದ ಭೌಗೋಳಿಕ ಸ್ಥಾನ ನೋಡಿದರೆ, ಕೆಲವು ಉತ್ತರಗಳು ಸಿಕ್ಕಾವು. ಮೇಲಿನಿಂದ ಹಿಮಾಲಯ, ಕೆಳಗಿನಿಂದ ಇಂದೂ ಮಹಾಸಾಗರದಿಂದ ಸುತ್ತುವರೆದ gifted ಭೌಗೋಳಿಕ ಸ್ಥಾನ, ಭಾರತಕ್ಕೆ ಹೊರಗಿನವರಿಂದ ಅಪಾರ ರಕ್ಷಣೆಯನ್ನು ನೀಡಿತು. ಹೊಡೆದಾಟ ಬಡಿದಾಟದಲ್ಲೇ ಜೀವನ ಕಳೆಯುವ ಬದಲು, ಕೊಂಚ ಒಳಮುಖರಾಗಲು, ಆಧ್ಯಾತ್ಮ, ಕಲೆ, ವಿಜ್ಞಾನ ಮುಂತಾದವುಗಳನ್ನು ಶೋಧಿಸಲು ನೆರವಾಯಿತು. ಅಷ್ಟಕ್ಕೂ ‘ಹಿಂದೂ’ ಎಂಬ ಹೆಸರು ಬಂದಿದ್ದೇ ‘ಹಿ’ಮಾಲಯ+'ಇಂದು' ಮಹಾಸಾಗರ ಸೇರಿಸಿ, ಇಲ್ಲಿಯ ಜನ ಅವುಗಳು ತಮಗೆ ನೀಡುತ್ತಿರುವ ರಕ್ಷಣೆಯ ಗೌರವಾರ್ಥವಾಗಿ ತಮ್ಮನ್ನು ತಾವು ‘ಹಿಂದು’ ಎಂದು ಕರೆದುಕೊಂಡಿದ್ದರಿಂದ.
ಇಲ್ಲಿಯ ಜನ ಕಂಡುಕೊಂಡ ಒಂದು ಸತ್ಯ ಎಂದರೆ - ‘ದೇವರು’ ನಮ್ಮ ಸೃಷ್ಟಿ. ಆ ಕಾರಣಕ್ಕಾಗಿಯೇ ಭಾರತದಲ್ಲಿ 33 ಮಿಲಿಯನ್ ದೇವತೆಗಳು ಅಸ್ತಿತ್ವಕ್ಕೆ ಬಂದದ್ದು. ಹಾಗೆಂದು ಇದು ಒಂದು ‘ನಂಬಿಕೆಯ’ ಹಿನ್ನಲೆಯಿಂದ ಬಂದಿದ್ದೇ? ಅಲ್ಲ!
‘ಆಗಮ ಶಾಸ್ತ್ರ’ ಎನ್ನುವ ಒಂದು ಶಾಸ್ತ್ರವೇ ದೇವಸ್ಥಾನಗಳನ್ನು ಕಟ್ಟುವ ಕುರಿತು ಶೋಧಿಸಲ್ಪಟ್ಟಿತು. ಪ್ರಾಣಶಕ್ತಿಯನ್ನು ವಿವಿಧ ಬಗೆಯಲ್ಲಿ ಪ್ರತೀಷ್ಠೀಕರಿಸುವ ವಿಧಾನಗಳು ಶೋಧಿಸಲ್ಪಟ್ಟವು. ಸದ್ಗುರುಗಳ ಮಾತಿನಲ್ಲಿ, ನೀವು ಆಹಾರವನ್ನು ಮಾಂಸ, ಎಲುಬುಗಳಿಗೆ ಬದಲಾಯಿಸುವುದನ್ನು ಕಲಿತರೆ - ಅದು ಜೀರ್ಣ ಪ್ರಕ್ರಿಯೆ. ಮಾಂಸ, ಎಲುಬುಗಳನ್ನು ಮಣ್ಣು ಮಾಡುವುದು - ಅಂತ್ಯಸಂಸ್ಕಾರ. ನೀವು ಅದೇ ಮನುಷ್ಯರನ್ನು, ಅಥವಾ ಒಂದು ಕಲ್ಲನ್ನು, ಅಥವಾ ಒಂದು ಖಾಲಿ ಜಾಗವನ್ನು, ಒಂದು ದೈವೀಕ ಸಾಧ್ಯತೆಯನ್ನಾಗಿಸುವುದನ್ನು ಕಲಿತರೆ - ಅದು ಪ್ರಾಣ ಪ್ರತಿಷ್ಠೆ. ಈ ಅಮೋಘ ವಿಜ್ಞಾನ ಭಾರತದಲ್ಲಿ ಮೊಳಕೆಯೊಡೆದು, ಬೃಹತ್ ವೃಕ್ಷವಾಗಿ ನಿಂತಿತು. ಅಗಸ್ತ್ಯ ಮುನಿಗಳು ಕೂಡ ಪ್ರಾಣ ಪ್ರತಿಷ್ಠೀಕರಿಸಿದ ಹಲವು ಸ್ಥಳಗಳು ದಕ್ಷಿಣ ಭಾರತದಲ್ಲಿವೆ.
‘ಆಗಮ’ - ದೇವಸ್ಥಾನಗಳನ್ನು ಕಟ್ಟುವ, ಒಂದು ದೈವೀಕ ಅನುಭೂತಿಯನ್ನು ಸ್ಥಾಪಿಸುವ, ಆ ಮೂಲಕ ಸಮಾಜದ ಪ್ರಜ್ಞೆಯನ್ನು ಅಪಾರ ಮಟ್ಟದಲ್ಲಿ ಉನ್ನತೀಕರಿಸುವ ಅಮೋಘ ವಿಜ್ಞಾನದ ಆಳ-ಅಗಲವನ್ನು ಶೋಧಿಸಿತು.
ನೀವು ನೋಡಿರಬಹುದು - ದಕ್ಷಿಣ ಭಾರತದಲ್ಲಿ ಕೆಲವೆಡೆ ‘ಟೆಂಪಲ್ ಟೌನ್’ಗಳಿವೆ. ಹಾಗೆಂದರೆ, ಅದನ್ನು ಕಟ್ಟಿದ ಕಾಲಕ್ಕೆ ಜನ ಮೊದಲು ಪಟ್ಟಣ ನಿರ್ಮಿಸಿ ನಂತರ ದೇವಸ್ಥಾನ ನಿರ್ಮಿಸಲಿಲ್ಲ. ಮೊದಲು ಬೃಹತ್ ದೇವಸ್ಥಾನಗಳನ್ನು ನಿರ್ಮಿಸಿ, ಸುತ್ತಲೂ ಜೋಪಡಿಯಲ್ಲಿ ವಾಸಿಸಿದರು! ಅವರು ಮೂರ್ಖರಾ? ಖಂಡಿತ ಅಲ್ಲ. ಪ್ರಾಣಪ್ರತಿಷ್ಠಿತ ಸ್ಥಳಗಳ ಸುತ್ತ ವಾಸಿಸುವುದು, ಸಮಾಜದ ಪ್ರಜ್ಞೆಯ ಮೇಲೆ ಎಂಥಹ ಅದ್ಭುತ ಪರಿಣಾಮಗಳನ್ನು ಮಾಡಬಹುದು ಎಂಬ ಪ್ರಜ್ಞೆ ಅವರಿಗಿತ್ತು.
ಭಾರತದಲ್ಲಿ ಕಲೆ, ಸಂಸ್ಕೃತಿ, ವಿಜ್ಞಾನ, ಖಗೋಳ, ಗಣಿತ, ಜ್ಯೋತಿಷ್ಯ ಇವೆಲ್ಲವೂ ಆ ಮಟ್ಟಿಗೆ ಆಗಿನ ಕಾಲದಲ್ಲೇ ಮುಂದುವರಿಯಲು - ಪ್ರಾಣ ಪ್ರತಿಷ್ಥಿತ ಸ್ಥಳಗಳ ಕೊಡುಗೆ ಅಪಾರ. ಭಾರತದಲ್ಲಿ ಎಲ್ಲೋ ಒಂದಿಬ್ಬರು ವಿಜ್ಞಾನಿಗಳು ಆಗಿ ಹೋಗಲಿಲ್ಲ. ಒಂದೆರಡು ಆತ್ಮಜ್ಞಾನಿಗಳು ಸಂಭವಿಸಲಿಲ್ಲ. ಕಲೆ, ವಿಜ್ಞಾನಗಳ ಒಂದೆರಡು ಭಾಗವನ್ನಷ್ಟೇ ಈ ನಾಗರೀಕತೆ ಸಂಶೋಧಿಸಿದ್ದಲ್ಲ. ಕಲೆಗೆ ಬಂದರೆ - ಶಾಸ್ತ್ರೀಯ ಸಂಗೀತ, ಭರತನಾಟ್ಯ ಇವೆಲ್ಲ ಸುಮ್ಮನೆ ಮನಸ್ಸಿಗೆ ಬಂದ ರೀತಿಯಲ್ಲಿ ಮಾಡಿದ್ದಲ್ಲ. ಹೊರಡುವ ಸ್ವರಗಳ, ನೃತ್ಯಗಳಲ್ಲಿ ರೂಪಿತವಾಗುವ ಚಲನೆಗಳ ಹಿಂದೆ ದೊಡ್ಡ ವ್ಯವಸ್ಥಿತ ಜ್ಞಾನದ ಭಂಡಾರವೇ ಇದೆ! ನಾನು ಹೇಳಲು ಹೊರಟಿರುವುದು ಏನೆಂದರೆ, ಇವೆಲ್ಲವುಗಳಲ್ಲಿ ಉನ್ನತವಾಗಿದ್ದ ಸಮಾಜಗಳನ್ನೇ ಈ ನೆಲ ಸೃಷ್ಟಿಸಿತು, ಒಂದೆರಡು ವ್ಯಕ್ತಿಗಳನ್ನಲ್ಲ! ಇವೆಲ್ಲ ಸಾಧ್ಯವಾಗಬೇಕು ಎಂದರೆ, ಮಾನವ ಪ್ರಜ್ಞೆ (consciousness) ಅನ್ನು ಪೋಷಿಸುವ, ನೀರೆರೆದು ಬೆಳೆಸುವ ಪ್ರಾಣಪ್ರತಿಷ್ಠಿತ ಸ್ಥಳಗಳು ಬೇಕು ಎಂಬ ಜ್ಞಾನ ಆ ಸಮಾಜಗಳಿಗೆ ಇತ್ತು. ಅದಕ್ಕೇ ದೇಶದ ತುಂಬೆಲ್ಲ ಸಹಸ್ರಾರು ದೇವಸ್ಥಾನಗಳನ್ನು ಕಟ್ಟಿದ್ದು, ರಾಜರು ಸ್ವತಃ ಕಾಳಜಿ ವಹಿಸಿ, ಭಕ್ತಿಯಿಂದ ಕಟ್ಟಿಸಿದ್ದು.
ಆದರೆ ಇಂದು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಈ ವಿಷಯಗಳನ್ನು ತಿಳಿದ ಜನರ ಸಂಖ್ಯೆ ಕೂಡ ಕಡಿಮೆಯೇ! ಹಿಂದೂಗಳಲ್ಲೇ ದೇವಸ್ಥಾನ ಕೇವಲ ’ಒಂದು ನಂಬಿಕೆ’ ಅಂದುಕೊಂಡು ವಾದಿಸುವವರಿದ್ದಾರೆ. ಈಗ ದೇವಸ್ಥಾನಗಳನ್ನು ಕಟ್ಟುವ ಪರಿಯೂ ಹಾಗೇ ಆಗಿದೆಯೇ? ಗೊತ್ತಿಲ್ಲ.
ಆದರೆ ಇವೆಲ್ಲವನ್ನು ಹೇಳಬೇಕು ಅನ್ನಿಸಿತು. ಕಂಪ್ಯೂಟರ್, ಫೋನ್, ರಾಕೆಟ್, ಮತ್ತೊಂದು ಮಾತ್ರ ವಿಜ್ಞಾನ ಅಂದುಕೊಂಡಿರುವ ನಮಗೆ, ಇಲ್ಲ, ಅವುಗಳಿಗಿಂತ ಗಹನವಾದ, ಬದುಕಿಗೆ ಹತ್ತಿರವಾದ, ಸರ್ವರ ಏಳಿಗೆ ಬಯಸುವ ಅಗಾಧ ಜ್ಞಾನ, ವಿಜ್ಞಾನಗಳು ನಮ್ಮಲ್ಲಿದ್ದವು ಎಂದು ನೆನಪಿಸುವ ಬಯಕೆಯಾಯಿತು. ಮತ್ತೊಮ್ಮೆ ಆ ಜ್ಞಾನಗಳು ಜೀವಂತವಾದರೆ, ಎಷ್ಟು ಚೆನ್ನಾಗಿರುತ್ತೆ ಅಲ್ಲವೇ? ಆದರೆ ಅದು ನಾಳೆ ಬೆಳಗಾಗುವುದರಲ್ಲಿ ಸಂಭವಿಸುವುದಿಲ್ಲ. ಅದನ್ನು ಕಾಲಕ್ರಮದಲ್ಲಿ ಆಗಿಸುವ, ಅದರ ಮಹತ್ವವನ್ನು ನಮ್ಮ ಹೃದಯಗಳಲ್ಲಿ ಜೀವಂತವಾಗಿರಿಸಿಕೊಂಡು ಬದುಕುವ, ಅದಕ್ಕಾಗಿ ಶ್ರಮಿಸುವ ಬದ್ಧತೆ ನಮ್ಮಲ್ಲಿ ಇದೆಯೇ?

No comments:
Post a Comment