ಕೃಷ್ಣ ಒಂದು ಅದ್ಭುತ ವ್ಯಕ್ತಿತ್ವ. ಆತ ವ್ಯಕ್ತಿತ್ವವೇ ಇಲ್ಲದ, ಎಲ್ಲ ವ್ಯಕ್ತಿತ್ವಗಳನ್ನು ಮೀರಿದ ವ್ಯಕ್ತಿತ್ವ.
‘ನಾನು ಸುಳ್ಳು ಹೇಳುವುದಿಲ್ಲ’ ಎಂದರೆ ಕೃಷ್ಣ ನಗುತ್ತಾನೆ. ‘ನಾನು ನೃತ್ಯ ಮಾಡುವುದಿಲ್ಲ’ ಎಂದರೆ ಕೃಷ್ಣ ಕರುಣೆಯ ನೋಟ ಬೀರುತ್ತಾನೆ. ರಾಧೆಯ ಪ್ರೀತಿಸಿದ ಕೃಷ್ಣ, 16ರ ನಂತರ 6 ವರುಷ ಸನ್ಯಾಸಿ. ಗುರುಕುಲಕ್ಕೆ ಹೋದ ಕೃಷ್ಣ ನಡೆಸಿದ್ದು ಕಠೋರ ಬ್ರಹ್ಮಚರ್ಯದ ಜೀವನ. ಕೊಳಲೂದುತ್ತ, ದನಗಳನ್ನು ಮೇಯಿಸುತ್ತ ಕೋಮಲ ಸ್ವಭಾವದ ಸಾಮಾನ್ಯ ಹುಡುಗನಾಗಿ ತೋರುವ ಕೃಷ್ಣ, ಯುದ್ಧಕಲೆಗಳ ನಿಪುಣ. ಸುಳ್ಳು ಹೇಳುತ್ತಾನೆ, ಮೋಸಮಾಡುತ್ತಾನೆ ಎಂದೆನಿಸುವ ಕೃಷ್ಣ, ಮಹಾಭಾರತದ ಕಾಲಕ್ಕೆ ಧರ್ಮ ಸಂಸ್ಥಾಪಿಸಿದ ಸೂತ್ರಧಾರಿ!
ಕೃಷ್ಣನನ್ನು ಒಂದು ವ್ಯಕ್ತಿತ್ವದ ಕಟ್ಟುಪಾಡಿಗೆ ಹಾಕಲು ಹೋದರೆ, ಅದು ಮೂರ್ಖತನ ಅಷ್ಟೇ.
ಇದು ಆತನ ಅತ್ಯಂತ ಪ್ರಮುಖ ಸಂದೇಶಗಳಲ್ಲಿ ಒಂದು ಎಂದು ನನ್ನ ಭಾವನೆ. ಆತನ ಬದುಕೇ ಆತನು ಜಗತ್ತಿಗೆ ನೀಡಿದ ಸಂದೇಶ. " ಸರಿ-ತಪ್ಪು, ಧರ್ಮ-ಅಧರ್ಮ ಮುಂತಾದವುಗಳು ನೀವಿರುವ ಕಾಲಕ್ಕೆ, ಅಥವಾ ಸಮಾಜಕ್ಕೆ ತಕ್ಕಂತೆ ಬದಲಾಗಬಹುದು. ಒಬ್ಬರ ಕಣ್ಣಿಗೆ ಕಂಡ ‘ಸರಿ’, ಮತ್ತೊಬ್ಬರ ಕಣ್ಣಿನಲ್ಲಿ ತಪ್ಪಾಗಬಹುದು. ಒಂದು ಪುಸ್ತಕದ ಧರ್ಮ, ಮತ್ತೊಂದು ಪುಸ್ತಕದಲ್ಲಿ ಅಧರ್ಮವಾಗಬಹುದು. ಸಾವಿರಾರು ಜನ, ಸಾವಿರಾರು ರೀತಿ ಹೇಳಬಹುದು. ಆದ್ದರಿಂದ, ನೀವು ಇರಬೇಕಾಗಿರುವುದು ಸನ್ನಿವೇಷಕ್ಕೆ ಹಾಗೂ ಜಾಗಕ್ಕೆ ’ಸೂಕ್ತ’ವಾಗಿ, ಎಲ್ಲೋ ಬರೆದಿಟ್ಟಿರುವ ಹಾಗೆ ‘ಇದೇ ಸರಿ’ ಎಂಬ ಕಟ್ಟುಪಾಡಿಗೆ ಬಂಧಿಯಾಗಿ ಅಲ್ಲ" ಎಂದು. ಈ ಮಾತುಗಳನ್ನು ಅವನು ಹೇಳಿರುವನೋ ಇಲ್ಲವೋ ಗೊತ್ತಿಲ್ಲ, ಆದರೆ ಅವನ ಜೀವನದಲ್ಲಿ ಕಾಣುತ್ತಿರುವುದಂತೂ ಅದೇ.
ಇದು ನನ್ನ ‘ಸಿದ್ಧಾಂತ’. ಇದು ನನ್ನ ‘ಧರ್ಮ’ ಎಂದು ನೀವು ತಿಳಿದುಕೊಂಡು, ಎಲ್ಲಾ ಸನ್ನಿವೇಶಗಳಲ್ಲೂ ಹಾಗೆಯೇ ವರ್ತಿಸಿದರೆ, ಅದು ತಪ್ಪಾದೀತು. ಉದಾಹರಣೆಗೆ, ರೌಡಿಯೊಬ್ಬ ಯಾರನ್ನೋ ಕೊಲ್ಲಲು ಅಟ್ಟಿಸಿಕೊಂಡು ಬರುತ್ತಿದ್ದಾನೆ ಎಂದುಕೊಳ್ಳಿ. ನಿಮಗೆ ಆತನ ಟಾರ್ಗೆಟ್ ಅವಿತಿರುವ ಜಾಗ ಗೊತ್ತು. ಈತ ನಿಮ್ಮ ಬಳಿ ಬಂದು ‘ಆತನನ್ನು ನೋಡಿದೆಯಾ?’ ಎಂದು ಕೇಳುತ್ತಾನೆ. ನೀವು ‘ಸತ್ಯ’ ನನ್ನ ಧರ್ಮ, ಯಾವಾಗಲೂ ಸತ್ಯವನ್ನೇ ಹೇಳಬೇಕು ಅಂತ ಹೇಳಿಕೊಟ್ಟಿದ್ದಾರೆ ಅಂತೆಲ್ಲ ಯೋಚನೆ ಮಾಡಿಕೊಂಡು, ಆತನಿಗೆ ಸತ್ಯವನ್ನೇ ಹೇಳಿದರೆ, ಆಗುವ ಪರಿಣಾಮ ಏನು? ಆ ಸನ್ನಿವೇಶದಲ್ಲಿ ಕೃಷ್ಣ ಇದ್ದಿದ್ದರೆ ಏನು ಮಾಡುತ್ತಿದ್ದ?
ಅಷ್ತಕ್ಕೂ ನೀವು ಒಂದು ‘ಸಿದ್ಧಾಂತ’ಕ್ಕೆ ಅಥವಾ ‘ನಂಬಿಕೆ’ಗೆ ಜೋತುಬಿದ್ದು, ಅದರ ಪ್ರಕಾರವಷ್ಟೇ ಕಾರ್ಯ ನಿರ್ವಹಿಸುತ್ತೀರಿ ಎಂದರೆ, ನಿಮ್ಮ ಕಾರ್ಯಾತ್ಮಕ ಬುದ್ಧಿವಂತಿಕೆ ಅಥವಾ active intelligence ಅನ್ನು ಒತ್ತೆ ಇಟ್ಟಿದ್ದೀರಿ ಅಂತ ಅರ್ಥ. ಅಥವಾ ಒಂದು ರೋಬೋಟ್ ಆಗಿದ್ದೀರಿ ಎಂದು ಅರ್ಥ. ಮನುಷ್ಯನ ನಿಜವಾದ ಗುಣ ಅದಲ್ಲ. ಅವನಿಗೆ ಒಂದು ಅದ್ಭುತವಾದ ಬುದ್ಧಿಶಕ್ತಿ ಮತ್ತು ಪ್ರಜ್ಞೆಯನ್ನು ಸೃಷ್ಟಿ ಕೊಟ್ಟಿದೆ. ಬಳಸಲಿ ಎಂದು. ನೀವಿರುವ ಪರಿಸ್ಥಿತಿಗೆ, ಸನ್ನಿವೇಶಕ್ಕೆ ಅನುಗುಣವಾಗಿ ನಿಮಗೆ ಹಾಗೂ ನಿಮ್ಮ ಸುತ್ತಲಿನವರಿಗೆ ಅತ್ಯಂತ ಶ್ರೇಷ್ಠವಾದುದನ್ನು ಮಾಡಲಿ ಎಂದು. ಹಾಗೆ ಮಾಡದಿದ್ದರೆ, ನೀವು ಸೃಷ್ಟಿಯ ಆ ಔದಾರ್ಯಕ್ಕೆ ಅಪಕೃತಿ ಎಸಗಿದ ಹಾಗೆ.
ಹಾಗಿದ್ದರೆ ಈಗ ಸಂವಿಧಾನ ಏಕೆ ಬೇಕು? ಗ್ರಂಥಗಳು ಏಕೆ ಬೇಕು? ಇವೆಲ್ಲದರ ಅವಶ್ಯಕತೆ ಇಲ್ಲವೇ ಎಂದು ನೀವು ಕೇಳಬಹುದು. ಒಂದು ವೇಳೆ ಸಮಾಜದ ಪ್ರತಿಯೊಬ್ಬ ಮನುಷ್ಯನೂ 100% ಮಾನವನಾದರೆ, ಅವನಲ್ಲಿ ಅವನ ಮಾನವೀಯ ಪ್ರಜ್ಞೆ ಉಕ್ಕಿ ಹರಿದರೆ, ಬಹುಶಃ ಅವುಗಳ ಅವಶ್ಯಕತೆ ಇರಲಿಕ್ಕಿಲ್ಲ. ಆದರೆ ಈಗ ಹಾಗಿಲ್ಲ. ಒಂದು ದೊಡ್ಡ ಸಮಾಜವನ್ನು ನಡೆಸಲು, ಸುಗಮವಾಗಿ ದೈನಂದಿನ ಚಟುವಟಿಕೆಗಳು ಸಾಗುವಂತೆ ಮಾಡಲು ಇವುಗಳ ಅವಶ್ಯಕತೆ ಇದೆ. ಆದರೆ ವೈಯಕ್ತಿಕವಾಗಿ, ನಿಮ್ಮ ಜೀವನದ ದೈನಂದಿನ ಚಟುವಟಿಕೆಗಳಲ್ಲಿ ನಿಮಗೆ ಸಿದ್ಧಾಂತ, ನಂಬಿಕೆ, ಗ್ರಂಥಗಳ ಅವಶ್ಯಕತೆ ಬರಬಾರದು. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ಅಧ್ಯಯನ ಮಾಡಲು, ನಿಮಗೆ ತಿಳಿಯದ ಜೀವನದ ಆಯಾಮಗಳ ಬಗ್ಗೆ ತಿಳಿಯಲು ಗ್ರಂಥಗಳ ಬಳಕೆ ಸರಿ. ಕೆಲಸ ಮಾಡುತ್ತಿದೆ ಎಂದು ಗೊತ್ತಿರುವುದರಿಂದ, ಹಿರಿಯರು ಹೇಳಿಕೊಟ್ಟ ಕೆಲವು ಸಂಗತಿಗಳನ್ನು ನಂಬಿ ಆಚರಿಸುವುದು ಸರಿ. ಆದರೆ, ನಿಮ್ಮ ಪಕ್ಕದ ಮನೆಯವರಿಗೆ ಸಹಾಯ ಮಾಡಲು, ಹಸಿದವರಿಗೆ ಸಾಧ್ಯವಾದರೆ ಅನ್ನಹಾಕಲು, ನಾಲ್ಕೈದು ಮರ ನೆಡಲು, ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ನೋಡಲು, ಸ್ವಲ್ಪ ಅಧ್ಯಾತ್ಮಿಕರಾಗಲು, ಸಮಾಜಕ್ಕೆ ಹೊರೆಯಾಗಿ ಬದುಕದೇ, ಅದಕ್ಕೆ ಪೂರಕವಾಗಿ ಬದುಕಲು - ನಿಮಗೆ ಗ್ರಂಥ, ಸಿದ್ಧಾಂತ, ನಂಬಿಕೆಗಳ ಅವಶ್ಯಕತೆ ಇರುವುದಿಲ್ಲ. ನಿಮ್ಮ ಪ್ರಜ್ಞೆ ಒಂದಿದ್ದರೆ ಸಾಕು.
ಆದರೆ ಈ ‘ಪ್ರಜ್ಞೆ’ ಎಂಬ ಸಂಗತಿಯನ್ನು ನಮ್ಮೊಳಗೆ ಕಾಪಿಟ್ಟುಕೊಳ್ಳುವುದು, ಬೆಳೆಸುವುದು, ನೀರೆರೆಯುವುದು ಬಹಳ ಸುಲಭದ ಕೆಲಸವೇನಲ್ಲ. ಸಾಧ್ಯವಾಗದ ಕೆಲಸವೂ ಅಲ್ಲ. ಭಾರತೀಯ ಸಂಸ್ಕೃತಿಯಂತೂ ಇದನ್ನು ಅರ್ಥಮಾಡಿಕೊಂಡು, ಅದರ ಸುತ್ತಲೇ ಬೆಳೆದಿರುವ ಸಂಸ್ಕೃತಿ. ನಮಗೆ - ನಿಮಗೆ ಈ ನಿಟ್ಟಿನಲ್ಲಿ ಬೆಳೆಯಲು ಕಷ್ಟವಾಗಬಾರದು.
ಮನುಷ್ಯ ತನ್ನ ಪ್ರಜ್ಞೆಯ ಮೇಲೆ ಬದುಕಿದಾಗ ಮಾತ್ರ, ಪ್ರತಿಕ್ಷಣವೂ ಪ್ರಜ್ಞಾಪೂರ್ವಕವಾಗಿ ಇದ್ದಾಗ ಮಾತ್ರ, ಒಂದು ಸಂಪೂರ್ಣ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಮನುಷ್ಯ ಈ ಧರೆಗೆ ವರವಾಗಿ ಪರಿಣಮಿಸಲು ಸಾಧ್ಯ. ಆ ನಿಟ್ತಿನಲ್ಲಿ ಕೆಲಸ ಮಾಡೋಣ.

No comments:
Post a Comment