Wednesday, August 18, 2021

ಮೈಮರೆಯದಿರಿ, ಸ್ವಾತಂತ್ರ್ಯ ಅಷ್ಟು ಹಗುರವಾದ ವಸ್ತುವಲ್ಲ!


ನಿನ್ನೆ ನಮ್ಮ ಸ್ವಾತಂತ್ರ್ಯೋತ್ಸವದ ದಿನವೇ ಈ ಘಟನೆ ನಡೆದಿದ್ದು ಕಾಕತಾಳೀಯ. ಅಫ್ಘಾನಿಸ್ತಾನ ತಾಲಿಬಾನ್ ನ ತೆಕ್ಕೆಗೆ ಬಿದ್ದಿದೆ. ಅಲ್ಲಿನ ಸರ್ಕಾರ ಉಗ್ರ ಪಡೆಗಳ ಮುಂದೆ ಮಂಡಿಯೂರಿ ಕುಳಿತಿದೆ.

ಯಾಕೆ ನಮ್ಮ ಸ್ವಾತಂತ್ರ್ಯೋತ್ಸವನ್ನು ಇದಕ್ಕೆ ಲಿಂಕ್ ಮಾಡಿದೆ ಎಂದರೆ ಈ ಘಟನೆ ನಮಗೆ ಒಂದು Reminder ಆಗಬೇಕು. ಸ್ವಾತಂತ್ರ್ಯ ಅಂದರೆ ಏನು? ಅದರ ಬೆಲೆ ಎಂಥದ್ದು? ನಾವು ಎಂಥಹ ಮಹತ್ವದ ಸಾಧ್ಯತೆಯಲ್ಲಿ ಬದುಕುತ್ತಿದ್ದೇವೆ ಎಂಬುದು ನಮಗೆ ಅರಿವಾಗಬೇಕು.

ಯಾವುದೇ ದೇಶವಿರಲಿ, ಯಾವುದೇ ಸಮಾಜವಿರಲಿ, ಅದನ್ನು ಪೋಷಿಸಲು, ಸುಸ್ಥಿತಿಯಲ್ಲಿ ಇಡಲು, ಹಲವಾರು ವ್ಯವಸ್ಥೆಗಳು ಸಾಮರಸ್ಯದಲ್ಲಿ ಕೆಲಸಮಾಡಬೇಕಾಗುತ್ತದೆ. ಆ ದೇಶದ ಆಡಳಿತ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಆಹಾರ ಉತ್ಪಾದನೆ/ಕೃಷಿ, ಸಂಚಾರ, ವಿವಿಧ ಸರಕು-ಸಾಮಗ್ರಿಗಳ ಸಾಗಣೆ,  ಶಿಕ್ಷಣ ಹೀಗೆ ಹಲವು ವ್ಯವಸ್ಥೆಗಳು ಒಂದು ಮಟ್ಟಿಗಿನ ಶಿಸ್ತಿನಲ್ಲಿ, ಬದ್ಧತೆಯಲ್ಲಿ ಕೆಲಸಮಾಡಬೇಕಾಗುತ್ತದೆ. ಇಲ್ಲ ಅಂದರೆ ಆ ದೇಶವಿಲ್ಲ. ಸಮಾಜವಿಲ್ಲ.


ನಮ್ಮ ದೇಶ 1947ರಲ್ಲಿ ಸ್ವತಂತ್ರವಾದಾಗ ಶ್ರೀಮಂತ ದೇಶವಾಗಿರಲಿಲ್ಲ. ಕೋಟ್ಯಂತರ ಜನರಿಗೆ ಹೊಟ್ಟೆಗೆ ಹಿಟ್ಟಿರಲಿಲ್ಲ. ನಮಗೆ ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ Life Expectancy ಅಂದರೆ ಸರಾಸರಿ ಪ್ರಜೆಯೊಬ್ಬ ಬದುಕುವ ಕಾಲ ಕೇವಲ 33 ವರ್ಷ ಆಗಿತ್ತು ಎಂದರೆ ನಂಬುವಿರೇ? ಅಂಥಹ ದೇಶವನ್ನು ಸಂಭಾಳಿಸುವುದು, ಮುನ್ನಡೆಸುವುದು, ಜನರಿಗೆ ಗೌರವಾನ್ವಿತ ಬದುಕನ್ನು ಒದಗಿಸುವುದು ಖಂಡಿತ ಸುಲಭದ ಕೆಲಸವಾಗಿರಲಿಲ್ಲ.

ಅಂದಿನಿಂದ ಇಂದಿನವರೆಗೆ ಬಹಳ ಸುಧಾರಣೆಗಳಾಗಿವೆ. ಭಾರತ ಆಹಾರದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ನಡೆದ 5 ಯುದ್ಧಗಳಲ್ಲಿ ನಾಲ್ಕನ್ನು ಗೆದ್ದಿದೆ. ಸದೃಢ ಸೈನ್ಯವನ್ನು ನಿರ್ಮಿಸಿಕೊಂಡಿದೆ. ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಗ್ರಹಗಳ ಮೂಲಕ ಸಂಪರ್ಕ ವ್ಯವಸ್ಥೆಗೆ ಸ್ವಾವಲಂಬಿಯಾಗಿದೆ. ಆಣೆಕಟ್ಟುಗಳು, ವಿದ್ಯುತ ಉತ್ಪಾದನಾ ಘಟಕಗಳು, ಒಳ್ಳೆಯ ರೋಡುಗಳು ನಿರ್ಮಾಣವಾಗಿವೆ. ವಿಶ್ವದ ಅನೇಕ ದೇಶಗಳ ಮುಂದೂ ಭಾರತ ಮಿಂಚುತ್ತಿದೆ. ನಮ್ಮಲ್ಲಿ ಬಹಳ ಸಮಸ್ಯೆಗಳು ಇಂದಿಗೂ ಇವೆ. ಅದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಆದರೆ, ಒಂದು ಮಟ್ಟಿಗಿನ ಗೌರವಯುತ ಜೀವನವನ್ನು ನಾವೆಲ್ಲರೂ ನಿರ್ವಹಿಸುತ್ತಿದ್ದೇವೆ.


ಆದರೆ ಈ ಸ್ವಾತಂತ್ರ್ಯ, ಈ ಗೌರವ, ಈ ಆರೋಗ್ಯ, ಈ ಹಣ, ಈ ಉಪಗ್ರಹಗಳು, ಸೈನ್ಯ, ರಸ್ತೆಗಳು, ಶಾಲೆಗಳು ಇವೆಲ್ಲವೂ ಸುಮ್ಮನೆ ಬಂದಿದ್ದಲ್ಲ. ಈ ದೇಶವನ್ನು ಇಲ್ಲಿಗೆ ತರಲು ಕೋಟ್ಯಂತರ ಜನ ಜೀವವನ್ನೇ ಕೊಟ್ಟಿದ್ದಾರೆ. ಇಂದಿಗೂ ಕೊಡುತ್ತಿದ್ದಾರೆ. ನಾವಿಂದು ರಾತ್ರಿ ನೆಮ್ಮದಿಯಿಂದ ಮಲಗುತ್ತೇವೆ ಎಂದರೆ ಕಾರಣ, ಅದಕ್ಕೆ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕ. ಆತನಿಗೂ ಹೆಂಡತಿ, ಮಕ್ಕಳಿದ್ದಾರೆ. ಕುಟುಂಬ ಇದೆ. ಆದರೂ ಆತ ಶತ್ರುವಿಗೆ ಎದೆಕೊಟ್ಟು ನಮ್ಮನ್ನು ಕಾಯಲು ಸಿದ್ಧನಿದ್ದಾನೆ. ರೈತರು ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇಲ್ಲ. ಆದರೂ ಅವರು ಧೃತಿಗೆಡದೆ ಕೃಷಿ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಇವತ್ತು ನಮ್ಮ ಪ್ಲೇಟಿನಲ್ಲಿ ಅನ್ನವಿದೆ. ಹೀಗೆ ವಿವಿಧ ರೀತಿಯ ಕಾರ್ಮಿಕರು, ತಂತ್ರಜ್ಞರು, ರಕ್ಷಕರು, ಶಿಕ್ಷಕರು, ಆಡಳಿತಗಾರರು ಎಲ್ಲರೂ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾಕೆ ಇವನ್ನೆಲ್ಲ ಹೇಳುತ್ತಿದ್ದೇನೆ ಎಂದರೆ - ಇದು ಒಂದು ಸೂಕ್ಷ್ಮ ವ್ಯವಸ್ಥೆ. ಇದರ ಬೆಲೆ ಅರಿಯದೆ ನಾವು ಒಂದು ಸ್ವಲ್ಪ ಮೈಮರೆತರೂ ಶತ್ರು ಕಾಯುತ್ತ ಕುಳಿತಿದ್ದಾನೆ. ಶತ್ರು ಎಂದಾಕ್ಷಣ ಅವ ಗಡಿಯ ಹೊರಗೆ ಇರುವವ ಮಾತ್ರ ಅಂತಲ್ಲ. Ofcourse, ಗಡಿಯ ಸುತ್ತಲೂ ಇದ್ದಾನೆ. ಆದರೆ ಒಳಗೂ ಈಗಾಗಲೇ ಹಲವರು ಇದ್ದಾರೆ. ಅಥವಾ ಒಮ್ಮೆ ಈ ವ್ಯವಸ್ಥೆ ತಲೆಕೆಳಗಾದರೆ, ನಮ್ಮಲ್ಲೇ ಅನೇಕರು ಹುಟ್ಟಿಕೊಳ್ಳಲೂಬಹುದು! ಸಾಧ್ಯವಿದೆ ಅಲ್ಲವೇ? ಸಾಮಾಜಿಕ ವ್ಯವಸ್ಥೆ ತಲೆಕೆಳಗಾದಾಗ ಸಾರ್ವಜನಿಕರೇ ಆಂತರಿಕ ಶತ್ರುಗಳಾಗಿ ಬದಲಾಗುತ್ತಾರೆ ಅಲ್ಲವೇ?

ಆದ್ದರಿಂದ ದೇಶದಲ್ಲಿ ಸುವ್ಯವಸ್ಥೆಯನ್ನು, ಸದೃಢ ಸಮಾಜವನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶ ಎಂಬ ಹಿರಿಮೆಯನ್ನು, ಭಾವನೆಯನ್ನು, ಸಾಮಾಜಿಕ ಪ್ರಜ್ಞೆಯನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಆಗ ಮಾತ್ರ ಈ ದೇಶದಲ್ಲಿ ಸದೃಢ ಸಮಾಜ ಹಾಗೂ ವ್ಯವಸ್ಥೆ ಇರಲು ಸಾಧ್ಯ. ಸ್ವಾತಂತ್ರ್ಯ ನಂತರ ಕಟ್ಟಿಕೊಂಡಿರುವ ಅನೇಕ ಸಂಗತಿಗಳು ಉಳಿಯಲು ಸಾಧ್ಯ. ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯ ಎಂದರೆ, “ಸಮಾಜದಲ್ಲಿ ಅನ್ಯಾಯವಾಗುತ್ತಿದೆ” ಎಂಬ ವಿಚಾರ ಬಂದಾಗ ಆ ಸಮಾಜ ಎಂಬುದು ನಾನೇ/ವೇ ಎಂಬುದನ್ನು ನೆನಪಿಸಿಕೊಳ್ಳಬೇಕು. ಆ ಸಮಸ್ಯೆಯ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳಬೇಕು. ನಮ್ಮ ಕೈಯಲ್ಲಿ ಏನು ಸಾಧ್ಯವೋ ಅದನ್ನು ಕುಂದಿಲ್ಲದಂತೆ ಮಾಡಬೇಕು. ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದೇ? ಇಲ್ಲ. ಸಮಸ್ಯೆಗಳಿಲ್ಲದ ಸಮಾಜ ಇಲ್ಲ. ಆದರೆ ಇನ್ನಷ್ಟು ಸಾಮರಸ್ಯದ ಹಾಗೂ ಆರೋಗ್ಯವಾದ ಸಮಾಜವನ್ನು ಖಂಡಿತವಾಗಿ ನಿರ್ಮಿಸಬಹುದು.

ನಾವು, ನಾವೇ ನಿರ್ಮಿಸಿಕೊಂಡ ವ್ಯವಸ್ಥೆಗಳ, ಪಡೆದುಕೊಂಡ ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ ಮಹತ್ವವನ್ನು ಯಾವ ಕ್ಷಣವೂ ಮರೆಯಬಾರದು. ಹಾಗೂ ನಾವು ಇಂದು ಸುರಕ್ಷಿತವಾಗಿ ಬದುಕಲು ಸಮಾಜದ ಅನೇಕರು ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಸಮಸ್ಯೆಗಳು ಬಂದಾಗ ಅದರ ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸಬೇಕು. ಕೋಮು, ಜಾತಿ, ರಾಜ್ಯ, ಧರ್ಮ, ಭಾಷೆ ಇವುಗಳ ಹೆಸರಿನಲ್ಲಿ ವೈಮನಸ್ಯಗಳನ್ನು, ವಿಭಜನೆಗಳನ್ನು ಸೃಷ್ಟಿಸಿಕೊಳ್ಳಬಾರದು. ನಮ್ಮ ನಡುವೆ ವಿಷ ಬಿತ್ತಲು ಯಾರದರೂ ಪ್ರಯತ್ನಿಸಿದರೆ, ಅಂತಹ ಶಕ್ತಿಗಳನ್ನು ಹೆಡೆಮುರಿಕಟ್ಟುವ ಬದ್ಧತೆ ನಮ್ಮಲ್ಲಿರಬೇಕು. ಅಂಥದ್ದಕ್ಕೆ ಸೊಪ್ಪು ಹಾಕುವಷ್ಟು ಮೂರ್ಖರಾಗಬಾರದು.

ಇಂಥಹ ಪ್ರಜ್ಞೆಯಿಂದ, ಪರಸ್ಪರ ಗೌರವ ಹಾಗೂ ಕೃತಜ್ಞತೆಯಿಂದ ಬದುಕಿದರೆ ಬಲಿಷ್ಠ ರಾಷ್ಟ್ರವಾಗಿ, ನಾವು ವಿಶ್ವಕ್ಕೇ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. ಸಾಮರಸ್ಯದಿಂದ, ಪ್ರಜ್ಞಾಪೂರ್ವಕವಾಗಿ ಬದುಕುವ ಬದ್ಧತೆಯನ್ನು ತೆಗೆದುಕೊಳ್ಳೋಣ. ನಮ್ಮ ಮುಂದೆಯೇ ಅಫ್ಘಾನ್ ನ ಉದಾಹರಣೆಯಿರುವುದರಿಂದ, ಈ ಬದ್ಧತೆಯನ್ನು ಮರುಸ್ಥಾಪಿಸಿಕೊಳ್ಳಲು, ಮತ್ತಷ್ಟು ಬಲಪಡಿಸಿಕೊಳ್ಳಲು ಇದಕ್ಕಿಂತ ಸುಸಮಯ ಇಲ್ಲ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು.


~ ಸಂಕೇತ್ ಡಿ ಹೆಗಡೆ

ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...