Monday, November 2, 2020

‘ಗುರು’ ನಾವಂದುಕೊಂಡಿರುವಂತೆ ಹಳೆಯ ಕಾಲಕಷ್ಟೇ ಸೀಮಿತವೇ?



ಅಷ್ಟಕ್ಕೂ ಇದನ್ನು ಬರೆಯುವ ಆಲೋಚನೆಯಿರಲಿಲ್ಲ. ಏಕೆಂದರೆ, ಯಾರು ಓದುತ್ತಾರೆ ಇದನ್ನೆಲ್ಲ?

ಇಡೀ ದಿನ ಪೊಲಿಟಿಕ್ಸ್ ಮತ್ತೊಂದರಲ್ಲಿ ಮುಳುಗಿಹೋಗಿರುವ ಸೋಷಿಯಲ್ ಮೀಡಿಯಾ ಪ್ರಪಂಚದಲ್ಲಿ ಬಂದು ಗುರುವಿನ ಕುರಿತು ಏನೆಂದು ಬರೆಯಲಿ. ಬರೆದು ಏನು ಸಾಧಿಸೋದು? ಹೇಗೆ ಶುರು ಮಾಡಲಿ, ಹಾಗೂ ಅಷ್ಟೆಲ್ಲ ಹೇಳಲು ’ಗುರು’ವಿನ ಅರ್ಥ ನನಗೆ ಸರಿಯಾಗಿ ಗೊತ್ತೇನು?

ಆದರೂ ಬರೆಯಬೇಕು ಅನ್ನಿಸಿತು. ಏಕೆಂದರೆ, ಸಹಸ್ರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯಲ್ಲಿ ಮಿಂದೆದ್ದ ಈ ದೇಶ, ಇಂದು ಇಷ್ಟು ಪ್ರಾಪಂಚಿಕ ಜಂಜಾಟದಲ್ಲಿ ಮುಳುಗಿಹೋಗಿ, ತನ್ನ ತನವನ್ನು ಎಲ್ಲಿ ಚೂರು ಕಳೆದುಕೊಂಡುಬಿಟ್ಟಿದೆಯೇನೋ ಎಂಬ ಭಯ.

ನಾವು ಇಂದು ಎಲ್ಲದಕ್ಕೂ ಗುರು ಎನ್ನುತ್ತೇವೆ. ಮಾರ್ಕೆಟಿಂಗ್-ಗುರು, ಮ್ಯಾನೇಜ್ ಮೆಂಟ್ ಗುರು, ಟೆಕ್ ಗುರು, ಆ ಗುರು, ಈ ಗುರು, ಒಟ್ಟಿನಲ್ಲಿ ಎಲ್ಲವೂ ಗುರು. ಕೆಲವರು ಇನ್ನೊಂದು ಹಾದಿಯಲ್ಲಿ ನನಗೆ ಪಾಠ ಮಾಡಿದ ಶಿಕ್ಷಕರು ಗುರು ಎಂದೋ, ಅಥವಾ ಇನ್ಯಾರೋ ಹಿರಿಯರು ಗುರು ಎಂದೋ ತಿಳಿದು ಪ್ರಕಟಿಸುತ್ತಿರುತ್ತಾರೆ.

ಆದರೆ ಈ ಗುರುಪೂರ್ಣಿಮೆ, ಇದ್ಯಾವುದರ ಕುರಿತೂ ಅಲ್ಲ. ಇದು ನಿಮ್ಮ ಶಿಕ್ಷಕರಿಗೆ ಶುಭಾಶಯ ಕೋರುವ ದಿನವಲ್ಲ. ಅಥವಾ ಮರೆತುಹೋಗಬಹುದಾದ ಮತ್ತೊಂದು ಹಬ್ಬ ಕೂಡ ಅಲ್ಲ.

ಗುರು ಪೂರ್ಣಿಮೆ, summer solstice ಮುಗಿದ ನಂತರ ಬರುವ ಅಂದರೆ ಆಷಾಢದ ಪ್ರಥಮ ಪೂರ್ಣಿಮೆ. ಇದರ ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ದಿನ, ಆದಿಯೋಗಿ ಶಿವ, ಏಳು ಋಷಿಗಳಿಗೆ, ಮಾನವ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆಂತರಿಕ ಜ್ಞಾನ ಅಥವಾ ಯೋಗ ವಿಜ್ಞಾನವನ್ನು ಧಾರೆ ಎರೆಯಲು ಶುರುಮಾಡಿದ. ಆ ಏಳು ಋಷಿಗಳನ್ನು ಸಪ್ತರ್ಷಿಗಳು ಎಂದು ಕರೆಯುತ್ತೇವೆ.

ಈ ಸಪ್ತರ್ಷಿಗಳು, ಅಂದರೆ ವಸಿಷ್ಠ, ಅಗಸ್ತ್ಯ, ಭೃಗು ಮುಂತಾದವರು ಈ ವಿಜ್ಞಾನವನ್ನು ಅತ್ಯಂತ ಜಾಗರೂಕತೆಯಿಂದ ವಿಶ್ವದ ಮೂಲೆಮೂಲೆಗೆ ಹರಡಿದರು. ಇಂದು ನಾವು ನೋಡಬಹುದಾದ ಅನೇಕ ಆಧ್ಯಾತ್ಮಿಕ ಪ್ರಕ್ರಿಯೆಗಳಲ್ಲಿ ಇವರ ಕೊಡುಗೆ ಸಾಕಷ್ಟಿದೆ.

ಇಲ್ಲಿಂದ ಶುರುವಾದ ಗುರು-ಶಿಷ್ಯ ಪರಂಪರೆ, ಭಾರತದ ಇತಿಹಾಸದುದ್ದಕ್ಕೂ ಒಂದು ರೋಮಾಂಚನಾಕಾರಿ ಸಂಗತಿ. ಗುರುವನ್ನು ಅತ್ಯಂತ ಶ್ರೇಷ್ಠನೆಂದೂ, ಜ್ಞಾನಿಯೆಂದೂ ಪರಿಗಣಿಸಲಾಗುತ್ತಿತ್ತು. ಆತನ ಮಾತುಗಳಿಗೆ ಅಷ್ಟು ತೂಕ ಮತ್ತು ಸನ್ಮಾನ ಇರುತ್ತಿತ್ತು.

ಏಕೆಂದರೆ ಬದುಕಿನಲ್ಲಿ ನಾವೇನೇ ಮಾಡುತ್ತಿರಬಹುದು. ಕೂಲಿ ಮಾಡುತ್ತಿರಬಹುದು ಅಥವಾ ರಾಜ್ಯವಾಳುತ್ತಿರಬಹುದು, ನಾವು ಅರಿತುಕೊಳ್ಳಬೇಕಾಗಿರುವ ಸಂಗತಿಯೆಂದರೆ ನಾವಿಲ್ಲಿ ಕ್ಷಣಿಕ. ಇವತ್ತು ಹುಟ್ಟಿ ನಾಳೆ ಸಾಯುತ್ತೇವೆ. ಹೌದು, ನಾವು ನಮ್ಮ ಬಗ್ಗೆಯೇ ಏನೇನೆಲ್ಲ ಅಂದುಕೊಂದಿರಬಹುದು. ಹಾಗೆ-ಹೀಗೆ ಎಂಬ ಅಭಿಪ್ರಾಯಗಳನ್ನಿಟ್ಟುಕೊಂಡಿರಬಹುದು. ಶ್ರೇಷ್ಟ-ಕನಿಷ್ಠ ಎಂಬ ಭಾವನೆಗಳಿರಬಹುದು. ಆದರೆ ನಾವೆಲ್ಲ ಇಲ್ಲಿ ಬದುಕಿರುವುದು ಕ್ಷಣಿಕ ಮಾತ್ರ. ಇದನ್ನು ಜನ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಈ ಹುಟ್ಟು-ಸಾವನ್ನು ಮೀರಿದ ಸಂಗತಿಯ ಬಗ್ಗೆ ಜನಕ್ಕೆ ಸಹಜ ಕುತೂಹಲವಿತ್ತು. ಈ ಚಕ್ರವನ್ನು ಮೀರಬೇಕೆಂಬ ತುಡಿತವಿತ್ತು. ಆದ್ದರಿಂದಲೇ ಈ ಸಂಸ್ಕೃತಿಯಲ್ಲಿ ’ಮುಕ್ತಿ, ಮೋಕ್ಷ’ ಎಂಬ ಪದಗಳಿಗೆ ಅಷ್ಟು ಮಹತ್ವವಿದ್ದುದ್ದು. ಜನರಿಗೆ ಅದನ್ನು ಹೊಂದಬೇಕೆಂಬ, ಸ್ವತಂತ್ರವಾಗಬೇಕೆಂಬ ಹಂಬಲವಿತ್ತು.

ಆದ್ದರಿಂದ ’ಗುರು’ ಅತ್ಯಂತ ಪ್ರಮುಖ ವ್ಯಕ್ತಿಯಾದ. ಆತ ಅಲ್ಲಿಗೆ ತಲುಪಿದ್ದ. ಹೇಗೆ ನಡೆಯಬೇಕು, ಯಾವ ದಾರಿ ಸುಲಭ, ಎಲ್ಲಿ ಬಾಗಬೇಕು, ಎಲ್ಲಿ ನಿಲ್ಲಬೇಕು, ಹೇಗೆ ಕರೆದುಕೊಂಡು ಹೋಗಬೇಕು ಎಂದು ಆತನಿಗೆ ತಿಳಿದಿತ್ತು. ಆತ ಹೇಳಿದ್ದು ಶಿರಸಾವಹಿಸಿ ಪಾಲಿಸಬೇಕಾದ ವಾಕ್ಯವಾಗಿತ್ತು.

ಈ ನೆಲದಲ್ಲಿ ಸಹಸ್ರಾರು ಗುರುಗಳು ಬಂದುಹೋದರು. ಆತ್ಮಜ್ಞಾನಿಗಳು ಸೃಷ್ಟಿಯಾದರು. ಆಧ್ಯಾತ್ಮಿಕ ಪ್ರಪಂಚವೇ ಬೆಳೆಯಿತು. ಆದಿಯೋಗಿಯಿಂದ ಶುರುವಾಗಿ, ಸಪ್ತರ್ಷಿಗಳಿಂದ ಮುಂದುವರಿದ ಈ ಪರಂಪರೆ - ವ್ಯಾಸ, ಶುಕ, ಪರಶುರಾಮ, ದತ್ತಾತ್ರೇಯ, ಅಷ್ಟಾವಕ್ರ, ಕೊನೆಗೆ ಶಂಕರರು, ಗೌತಮ ಬುದ್ಧ ಇವರನ್ನೆಲ್ಲ ಒಳಗೊಂಡಿತು. ರಾಮಕೃಷ್ಣ, ರಮಣರೂ ಆಗಿಹೋದರು. ಇವರೆಲ್ಲ ಮುಕುಟಮಣಿಗಳಷ್ಟೇ. ಸಹಸ್ರಾರು ಯೋಗಿಗಳು, ಮಹರ್ಷಿಗಳು, ಗುರುಗಳು ಆಗಿಹೋದರು. ಆಯಾ ಕಾಲದಲ್ಲಿ ಯಾವುದು ಸೂಕ್ತವೋ, ಸಮಾಜಕ್ಕೆ ಏನು ಬೇಕೋ ಎಲ್ಲವನ್ನೂ ಮಾಡಿದರು. ಹಲವರ ಆಧ್ಯಾತ್ಮ ಉನ್ನತಿಗೆ ಕಾರಣರಾದರು. ಆಧ್ಯಾತ್ಮ ಸಂಪತ್ತನ್ನು ವಿವಿಧ ರೀತಿಯಲ್ಲಿ ಬಿಟ್ಟು ಹೋದರು ಕೂಡ.

ಈ ಅಭೂತಪೂರ್ವ ಪರಂಪರೆ, ಈ ದೇಶದ ಪ್ರಜ್ಞೆಯನ್ನು ನಿರ್ಮಿಸಿತ್ತು. ಜೀವನಶೈಲಿಯನ್ನು ರೂಪಿಸಿತ್ತು. ಜನ ತಮ್ಮನ್ನು ತಾವು ನಿಭಾಯಿಕೊಳ್ಳುವಷ್ಟು, ನಗುನಗುತ್ತ ಸುತ್ತಲಿನವರಿಗೂ ಒಳ್ಳೆಯದನ್ನು ಮಾಡುವಷ್ತು ಸಶಕ್ತರಾಗಿದ್ದರು. ಜೀವನದ ಪರಮಗುರಿಯೆಡೆಗೆ ಸಾಗುವಲ್ಲಿ ಜೀವನವನ್ನು ರೂಪಿಸಿಕೊಳ್ಳುತ್ತಿದ್ದರು.

ಒಂದಷ್ಟು ಆಕ್ರಮಣಗಳಾದವು ನೋಡಿ, ಕಳೆದ ಸಾವಿರ ವರ್ಷಗಳಲ್ಲಿ. ಸುಮಾರು ಹತ್ತಿಪ್ಪತ್ತು ಹೊರದೇಶೀ ಆಕ್ರಮಗಳಾಗಿರಬಹುದಲ್ಲ? ಅಥವಾ ಅದಕ್ಕಿಂತ ಹೆಚ್ಚೇ. ಹೋಗುವವರು ಅನೇಕವನ್ನು ಕಿತ್ತುಕೊಂಡು ಹೋದದ್ದು ಹೌದು. ಆದರೆ ನಾವು ಬಿಟ್ಟ ಅನೇಕ ವಸ್ತುಗಳಲ್ಲಿ, ಕೆಲವಷ್ಟು ‘ನಮ್ಮತನ’ ಕೂಡ ಹೌದು. 1947ರ ಸ್ವಾತಂತ್ರ್ಯ ನಂತರವಂತೂ, ನಾವು ಭವ್ಯ ಭಾರತವನ್ನು ಪುನರ್ ನಿರ್ಮಿಸುವ ಕಾರ್ಯಕ್ಕಿಂತ ಹೆಚ್ಚಾಗಿ, ನಮ್ಮ ಕಣ್ಣುಗಳಲ್ಲಿ ಭವ್ಯವಾಗಿ ಕಂಡ ಪಾಶ್ಚಾತ್ಯವನ್ನು ಇಲ್ಲೂ ನಿರ್ಮಿಸುವ ದಿಕ್ಕಿನಲ್ಲೇ ಹೆಜ್ಜೆ ಇಟ್ಟೆವು.

ನಮ್ಮ ಶಿಕ್ಷಣ ಆಂಗ್ಲರ ಮಾದರಿಯದ್ದಾಯಿತು. ಅವರು ಬಿಟ್ಟುಹೋದ ಇತಿಹಾಸವನ್ನೇ ನಮ್ಮ ಮಕ್ಕಳಿಗೆ ಕಲಿಸಿದೆವು. ಇತ್ತೀಚಿಗೆ, ಆರ್ಥಿಕ ಕ್ರಾಂತಿಯ ನಂತರವಂತೂ ಅವರು ತಿನ್ನುವುದನ್ನು ನಾವೂ ತಿನ್ನಲು ಕಲಿತೆವು. ಅವರ ಬಟ್ಟೆಯನ್ನು ನಾವು ಹಾಕತೊಡಗಿದೆವು. ಒಟ್ಟಿನಲ್ಲಿ ಅವರ ಬದುಕನ್ನು ಅವರಿಗಿಂತ ಚೆನ್ನಾಗಿ ನಾವೇ ಬದುಕಲು ಆರಂಭಿಸಿದೆವು!

ಸರಿ. ತಪ್ಪೇನಿಲ್ಲ. ಸಾವಿರ ವರ್ಷಗಳ ಹಿಂದೆ ಬದುಕಿದಂತೆ ಈಗಲೂ ಬದುಕಬೇಕು ಎಂದು ಹೇಳುತ್ತಿಲ್ಲ. ಆದರೆ ನಮ್ಮ ಜೀವನಶೈಲಿ ನಮಗೆ ಸಂತೋಷವನ್ನು ತಂದುಕೊಟ್ಟಿದೆಯೇ? ಎಷ್ಟು ದಿನ ಸಂಪೂರ್ಣ ಆನಂದದಲ್ಲಿ ನಾವು ಕಳೆಯುತ್ತಿದ್ದೇವೆ? ಆರೋಗ್ಯ ತಂದುಕೊಟ್ಟಿದೆಯೇ? ಮಾನಸಿಕ ಸ್ಥಿಮಿತ ತಂದಿದೆಯೇ? ಇವೇ ಇಲ್ಲ ಎಂದ ಮೇಲೆ, ಇದರ ಮುಂದಿನ ಹೆಜ್ಜೆಯಾದ ಆಧ್ಯಾತ್ಮದ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ.

ನಾವು ಏನೇ ಮಾಡುತ್ತಿರಬಹುದು. ಸಾಫ್ಟ್ವೇರ್ ಇಂಜಿನಿಯರ್ ಆಗಿರಬಹುದು, ಶಿಕ್ಷಕರಾಗಿರಬಹು, ಡಾಕ್ಟರೋ, ವಕೀಲರೋ ಆಗಿರಬಹುದು, ಅಥವಾ ಆಟೋ, ಬಸ್ ಡ್ರೈವರ್ ಆಗಿರಬಹುದು - ಇದ್ದಷ್ಟು ದಿನ ಸಂತೋಷದಿಂದ, ಆರೋಗ್ಯದಿಂದ, ಸುಗಮವಾಗಿ ಬದುಕುವುದು ಮುಖ್ಯವಲ್ಲವೇ? ಆದ್ದರಿಂದ ಇದ್ಯಾವುದೂ ಔಟ್-ಡೇಟೆದ್ ಅಲ್ಲ. ನಮ್ಮ ಹೊರಪ್ರಪಂಚ ಬದಲಾಗಿರಬಹುದು, ಆದರೆ ಆಂತರಿಕ ವಿಜ್ಞಾನ ಹಾಗೇ ಇದೆ. ನಮ್ಮನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ವಿಜ್ಞಾನ ಹಾಗೇ, ಈ ದೇಶದ ಒಡಲಲ್ಲಿ, ನಮಗಾಗಿ ಕಾಯುತ್ತ ಇದೆ.

’ಗುರು’ ಆ ನಿಟ್ಟಿನಲ್ಲಿ ಪ್ರಮುಖನಾಗುತ್ತಾನೆ. ಇರುವ ಮೂರು ದಿನವನ್ನು ಪ್ರಜ್ಞಾಪೂರ್ವಕವಾಗಿ ಹೇಗೆ ಕಳೆಯುವುದು ಎಂಬುದನ್ನು ಅರ್ಥಮಾಡಿಸಲು. ಆ ದಾರಿಯಲ್ಲಿ ಕರೆದೊಯ್ಯಲು. ಅಡೆತಡೆಗಳಿದ್ದರೆ ತನ್ನ ಹೆಗಲ ಮೇಲೆ ಹೊತ್ತು ದಾಟಿಸಲು. ಸದಾ ಪ್ರೀತಿ ತೋರಲು ಹಾಗೂ ನಾವು ನಿದ್ರಿಸದಂತೆ ಹಾಗೇ ಕಠೋರವಾಗಿರಲು. ಮುಳುಗಿಹೋಗಿರುವ, ಚಿಕ್ಕ ಸಂಗತಿಗಳನ್ನು ಪರಮೋನ್ನತ ಅಂದುಕೊಂಡು ನಮ್ಮದೇ ಲೋಕದಲ್ಲಿ ಸಾಗುತ್ತಿರುವ ನಮ್ಮನ್ನು ಬಡಿದೆಬ್ಬಿಸಿ, ಬೆಳಕು ಚೆಲ್ಲಲು. ಒಂದಷ್ಟು ನಗು ತರಲು. ಒಂದಷ್ಟು ಹಗುರಮಾಡಲು.

ಶುಭವಾಗಲಿ. ಗುರುವಿನ ಕೃಪೆ ನಮ್ಮ ಮೇಲಿರಲಿ.

No comments:

Post a Comment

ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...