ದಲಿತ ಎಂಬ ಕಾರಣಕ್ಕೆ ಅಲ್ಲ, ಮಹಿಳೆ ಎಂಬ ಕಾರಣಕ್ಕೆ ಅಲ್ಲ, ಮಗು ಎಂಬ ಕಾರಣಕ್ಕೆ ಅಲ್ಲ, ತನಗಿಂತ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಅಥವಾ ಇನ್ಯಾವುದೇ ಸ್ಥರದಲ್ಲಿ ಬಲಹೀನರಾಗಿರುವ ಯಾರನ್ನೇ ಆದರೂ exploit ಮಾಡುವುದು ಮನುಷ್ಯನ ಸ್ವಭಾವೇ ಆಗಿ ಹೋಗಿದೆ.
ನೀವು ಇದನ್ನು ಎಲ್ಲೆಲ್ಲೂ ನೋಡಬಹುದು. ಬೀದಿಬದಿಯ ಅಂಗಡಿಗಳಿಂದ ಕಾರ್ಪೋರೇಟ್ ಆಫೀಸುಗಳ ಎಸಿ ರೂಮುಗಳವರೆಗೆ, ಎಲ್ಲೆಲ್ಲೂ ಈ ಸ್ವಭಾವ ಕಾಣಸಿಗುತ್ತದೆ.
ಸ್ವಲ್ಪ ಮಾತುಕಡಿಮೆಯಾಡುವವನಿದ್ದರೆ, ಅಪಹಾಸ್ಯಕ್ಕೆ ಪ್ರತಿಹಾಸ್ಯ ಮಾಡಲು ಬರದ ವ್ಯಕ್ತಿ ಸಿಕ್ಕರೆ, ಅವನನ್ನು ಯದ್ವಾತದ್ವಾ ಹಾಸ್ಯ ಮಾಡುವ, ಆನಂದ ಪಡುವ ಜನ ಸಿಗುತ್ತಾರೆ. ಗೊತ್ತಿಲ್ಲದೇ ನಾವೂ ಮಾಡಿರುತ್ತೇವೆ. ಆಡಲು ಸರಿಯಾಗಿ ಬರದವ ನಮ್ಮ ಜೊತೆ ಕ್ರೀಡೆಯೊಂದರಲ್ಲಿ ಆಡುತ್ತಿದ್ದರೆ, ಅವನನ್ನು exploit ಮಾಡುತ್ತಿರುತ್ತೇವೆ. ಓದಲು ಸರಿಯಾಗಿ ಬಾರದ ಹುಡುಗನೊಬ್ಬ ಶಾಲೆಯಲ್ಲಿದ್ದರೆ, ಆತನ ಸ್ಠಿತಿ ಅಧೋಗತಿ. ಅಧಿಕಾರದಲ್ಲಿರುವವರು ಅಧಿಕಾರವಿರದವರ ಮೇಲೆ exploit ಮಾಡುತ್ತಿರುತ್ತಾರೆ. ಅಧಿಕಾರವಿಲ್ಲದವನು ನಾಳೆ ಅಧಿಕಾರಕ್ಕೆ ಬಂದರೆ, ಅವನು ಮಾಡುವುದೂ ಅದನ್ನಷ್ಟೇ.
ಮಹಿಳೆಯರ ಮೇಲಾಗಲೀ, ಮಕ್ಕಳ ಮೇಲಾಗಲಿ, ಜಾತಿ ಸಮುದಾಯದ ಮೇಲಾಗಲೀ, ಅಥವಾ ಇನ್ಯಾರ ಮೇಲೇ ಆಗಲಿ, ಅವರು ಶೋಷಣೆಗೊಳಗಾಗುವ ಮೂಲಕಾರಣ ದೈಹಿಕವಾಗೋ, ಸಾಮಾಜಿಕವಾಗೋ, ಮತ್ತೊಂದೋ, ಅವರು ಶೋಷಿಸಿದವರಷ್ಟು ಬಲಶಾಲಿ ಅಲ್ಲ ಎಂಬುದಷ್ಟೇ.
ಮನುಷ್ಯನ ಈ ಸ್ವಭಾವದ ಮೇಲೆ ಸಮಾಜ ಕೆಲಸ ಮಾಡಬೇಕು. Exploit ಮಾಡುವ ಅವಶ್ಯಕತೆ ಮನುಷ್ಯನಿಗೆ ತೋರದ ರೀತಿಯಲ್ಲಿ ಆತನಲ್ಲಿ ಗುಣ ಸ್ವಭಾವಗಳು ಬೆಳೆಯುವಂತೆ ಮಾಡಬೇಕು. ‘ನಾನು ಓದುವುದರಲ್ಲಿ ಮುಂದಿರಬಹುದು, ಮತ್ತೊಬ್ಬ ಆಟದಲ್ಲಿರಬಹುದು. ಸಾಮಾಜಿಕವಾಗಿ ಯಾರ್ಯಾರೋ ಯಾವ್ಯಾವುದೋ ಸ್ಥಿತಿಯಲ್ಲಿ ಇರಬಹುದು. ಆರ್ಥಿಕವಾಗಿ ನನಗಿಂತ ಕೆಳಗಿನ ಸ್ಥಿತಿಯಲ್ಲಿ ಯಾರೋ ಇರಬಹುದು. ಆದರೆ ನನಗೆ ಯಾರನ್ನೂ ಶೋಷಿಸುವ ಅಥವಾ exploit ಮಾಡುವ ಅವಶ್ಯಕತೆ ಕಾಣದಂತೆ ನನ್ನ ಮಾನಸಿಕ ಮತ್ತು ಭಾವನಾತ್ಮಕ ಶಿಕ್ಷಣ ಇರಬೇಕು. ಯಾರು ಯಾವ ಸ್ಥಿತಿಯಲ್ಲೇ ಇರಲಿ, ಅವರನ್ನು ಮೇಲೆ ತರಲು ನನಗೆ ಸಾಧ್ಯವಾಗುತ್ತೋ ಇಲ್ಲೋ ಬೇರೆ ವಿಷಯ, ಆದರೆ ನನಗೆ ಅವರನ್ನು ಶೋಷಿಸುವ ಯಾವುದೇ ಅವಶ್ಯಕತೆ ಇಲ್ಲ’. ಈ ಮನಸ್ಠಿತಿ ಸಮಾಜದ ಪ್ರತೀ ವ್ಯಕ್ತಿಯಲ್ಲೂ ಬೆಳೆಯುವಂತೆ ಮಾಡಬೇಕು.
ಇದನ್ನು ನಾಳೆ ಬೆಳಗಾಗುವುದರಲ್ಲಿ ಮಾಡಲು ಸಾಧ್ಯವೇ? ಖಂಡಿತ ಇಲ್ಲ. ಹಾಗಂತ, ಇದು ಕೇವಲ ಪುಸ್ತಕದ ಮಾತೇ? ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ.
ಶಿಕ್ಷಣ ಹೇಗಾಗಿಹೋಗಿದೆ ಎಂದರೆ, ಪುಸ್ತಕದ ಕಂತೆ ಸೇರಿಸಿ, ‘ಇಷ್ಟನ್ನು ಓದಿದರೆ ನೀನು ಗೆದ್ದಂತೆ, ಜಗತ್ತಿನಲ್ಲಿ ಹೇಗೆ ಬೇಕಾದರೂ ಇರು’ ಎಂಬ ವ್ಯವಸ್ಥೆ. ಮಕ್ಕಳ ಮಾನಸಿಕ, ದೈಹಿಕ, ಆಧ್ಯಾತ್ಮಿಕ ಹಾಗೂ ಸರ್ವತೋಮುಖ ದೃಢತೆಗೆ ಅಲ್ಲಿ ಯಾವ ಲಕ್ಷ್ಯವೂ ಇದ್ದಂತಿಲ್ಲ. ಒಂದು ಉದ್ಯಾನವನವಿದೆ ಎಂದುಕೊಳ್ಳಿ. ಒಂದಷ್ಟು ಗಿಡ ಬೆಳೆಸುತ್ತಿರುವಿರಿ. ನಾನು ಗಿಡಗಳಿಗೆ ಸೂರ್ಯನ ಬೆಳಕನ್ನು ಮಾತ್ರ ಕೊಡುತ್ತೇನೆ, ನೀರು ಹಾಕುವುದಿಲ್ಲ, ನೀರನ್ನು ಮಾತ್ರ ಹಾಕುವೆ, ಬುಡದಲ್ಲಿ ಮಣ್ಣನ್ನು ಒದಗಿಸುವುದಿಲ್ಲ ಎಂದರೆ ಗಿಡಗಳು ಬೆಳೆಯುತ್ತವೆಯೇ? ಅದರಲ್ಲಿ ಸುಂದರ ಹೂವುಗಳು ಅರಳುತ್ತವೆಯೇ? ನಾವು ನಮ್ಮ ಮಕ್ಕಳಿಗೆ ಮಾಡುತ್ತಿರುವುದು ಅದನ್ನೇ!
ಇರಲಿ. ಸಮಾಜದಲ್ಲಿ ಅಹಿತಕರ ಘಟನೆಗಳಾದಾಗ ಹೊಯ್ದುಕೊಳ್ಳುವ ನಾವೆಲ್ಲರೂ ಉಳಿದ ದಿನಗಳು ಮಲಗಿರುತ್ತೇವೆ. ಎರಡು ದಿನ ಹುಯ್ ಹುಯ್ ಎಂದು, ಮತ್ತೆ ಪುನರಾವರ್ತನೆ. ಇದೆಲ್ಲದರಿಂದ ಕ್ಷಣಿಕ ತೃಪ್ತಿ ಸಿಗಬಹುದೇ ಹೊರತು, ಒಂದಷ್ಟು ಕೋಪ ಹೊರಹೋಗಬಹುದೇ ಹೊರತು - ಇವು ಪರಿಣಾಮಕಾರಿ ಪರಿಹಾರವಲ್ಲ. ಪರಿಣಾಮಕಾರಿ ಪರಿಹಾರಗಳು ಎಲ್ಲರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತವೆ. ನಿಯತ್ತನ್ನು ಬಯಸುತ್ತವೆ. ಎರಡು ದಿನದ ಕ್ರೋಧವನ್ನಲ್ಲ.
~ ಸಂಕೇತ್ ಡಿ ಹೆಗಡೆ

No comments:
Post a Comment